ಮೈಸೂರು (ಏ. 16): ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯ ಮತದಾನ ಕುರಿತು ಅರಿವು ಮೂಡಿಸಲು ಮೈಸೂರಿನ ಹೋಟೆಲ್‌ ಮಾಲೀಕರ ಸಂಘ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಮತದಾನದಲ್ಲಿ ಪಾಲ್ಗೊಂಡ ಯುವಕ-ಯುವತಿಯರಿಗೆ ಹೋಟೆಲ್‌ನ ತಿಂಡಿ, ಊಟೋಪಚಾರ ಪಡೆದವರಿಗೆ ಶೇ.50ರಷ್ಟುರಿಯಾಯಿತಿ ನೀಡಲು ಹೋಟೆಲ್‌ ಮಾಲೀಕರು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಮೈಸೂರು ನಗರಾದ್ಯಂತ ಇರುವ ಎಲ್ಲಾ ಹೋಟೆಲ್‌, ರೆಸ್ಟೋರೆಂಟ್‌, ಲಾಡ್ಜ್‌ಗಳಲ್ಲಿ ಭಿತ್ತಿಪತ್ರ ಅಂಟಿಸಿ, ಗ್ರಾಹಕರಿಗೆ ಅರಿವು ಮೂಡಿಸಲಾಗುವುದು. ‘ಮರೆಯದೆ ಮತದಾನ ಮಾಡಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಶೀರ್ಷಿಕೆಯಡಿ ತಪ್ಪದೇ ಮತದಾನ ಮಾಡಿ, ನಂತರ ಅನ್ಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ, ತಮ್ಮೊಂದಿಗೆ ಕುಟುಂಬದ ಸದಸ್ಯರನ್ನು ಸಹ ಮತ ಚಲಾಯಿಸಲು ಉತ್ತೇಜಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕನ್ನಡ-ಇಂಗ್ಲಿಷ್‌ನಲ್ಲಿ ಭಿತ್ತರಿಸಲಾಗಿದೆ ಎಂದು ಹೇಳಿದರು.

60 ವರ್ಷ ಮೇಲ್ಪಟ್ಟಹಿರಿಯ ನಾಗರಿಕ ದಂಪತಿಗೆ ಕೆಲವು ವಸತಿ ಗೃಹಗಳಲ್ಲಿ ಶೇ.50ರಷ್ಟುರಿಯಾಯಿತಿ ನೀಡಲಾಗುವುದು. ಹೊರಗಿನಿಂದ ಬರುವ ಗ್ರಾಹಕರು ಮತದಾನ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿ ಹೋಟೆಲ್‌ ರೂಂ ನೀಡಲಾಗುವುದು. ಅತಿ ಹೆಚ್ಚು ಮತದಾನ ಮಾಡಿಸಿದ ಮೂವರು ಹೋಟೆಲ್‌ ಮಾಲೀಕರಿಗೆ ಏ.30ರಂದು ಸನ್ಮಾನಿಸಲಾಗುವುದು. ಕೆಲವು ಹೋಟೆಲ್‌ನಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ.20ರಿಂದ 30ರಷ್ಟುರಿಯಾಯಿತಿ ನೀಡಲಾಗುವುದು ಎಂದರು.