ಕೋಲ್ಕತ್ತಾ[ಆ.21]: ಕೋಲ್ಕತ್ತಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಲ್ಲಿನ ಆಸ್ಪತ್ರೆಯೊಂದರ ಶವಾಗಾರದಲ್ಲಿದ್ದ ಮೃತದೇಹದಿಂದ ಕಣ್ಣುಗಳೇ ನಾಪತ್ತೆಯಾಗಿವೆ. ಈ ಸಂಬಂಧ ದೂರು ದಾಖಲಾದ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ತನಿಖೆ ಆರಂಭಿಸಿದ್ದು, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ ಬಳಿಕ ಕಣ್ಣುಗಳು ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರದಂದು 69 ವರ್ಷದ ಶಂಭುನಾಥ ಹೆಸರಿನ ವ್ಯಕ್ತಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರ ತಲೆಗೆ ಗಂಭೀರ ಏಟಾಗಿತ್ತು. ಹೀಗಾಗಿ ವರನ್ನು ಕೂಡಲೇ ಹತ್ತರದ ವೈದ್ಯಕೀಯ ಕಾಲೇಜು, ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಲ್ಲಿ ಅವರನ್ನು ಮೃತರೆಂದು ಘೋಷಿಸಲಾಯ್ತು.

ಮೃತ ವ್ಯಕ್ತಿಯ ಪುತ್ರ ಸುಶಾಂತ್ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದು, 'ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ನಮಗೆ ಹಸ್ತಾಂತರಿಸಿದಾಗ, ತಂದೆಯ ಕಣ್ಣುಗಳಿಲ್ಲದಿರುವ ವಿಚಾರ ಗಮನಕ್ಕೆ ಬಂದಿದೆ. ಈ ಕುರಿತಾಗಿ ವಿಚಾರಿಸಿದಾಗ ಮೃತದೇಹದ ಕಣ್ಣುಗಳನ್ನು ಇಲಿಗಳು ಕಿತ್ತುಹಾಕಿವೆ ಎಂದು ಶವಾಗಾರದ ಸಿಬ್ಬಂದಿ ತಿಳಿಸಿದ್ದಾರೆ' ಎಂದಿದ್ದಾರೆ.

ಸದ್ಯ ಪ್ರಕರಣದ ತನಿಖೆಗಾಗಿ ಆಸ್ಪತ್ರೆ ಆಡಳಿತ ಮಂಡಳಿ ಮೂವರು ಸದಸ್ಯರ ಸಮಿತಿ ರಚಿಸಿದೆ. ಹೀಗಿದ್ದರೂ ಆಸ್ಪತ್ರೆ ಆವರಣದಲ್ಲಿ ಆತಂಕದ ವಾತಾವರ್ಣ ನಿರ್ಮಾಣವಾಗಿದೆ.