ಮೀಸೆ ಇಲ್ಲದೇ ಗಡ್ಡ ಬಿಟ್ಟ ಮುಸ್ಲಿಮರು ಭಯೋತ್ಪಾದಕರಂತೆಶಿಯಾ ವಕ್ಫ್ ಮಂಡಳಿಯ ಚೇರ್ಮನ್ ವಾಸಿಂ ರಿಝ್ವಿ ಹೇಳಿಕೆಅರ್ಥಹೀನ ಫತ್ವಾ ಹೊರಡಿಸುವುದು ದೇಶದ್ರೋಹದ ಕೆಲಸರಿಝ್ವಿ ಕೊಲ್ಲಲು ಪಾತಕಿ ದಾವೂದ್ ಬಂಟರ ಸ್ಕೆಚ್?
ನವದೆಹಲಿ(ಜು.8): ‘ಇಸ್ಲಾಂನಲ್ಲಿ ಗಡ್ಡ ಬಿಡುವುದು ಸಂಪ್ರದಾಯವಾಗಿದೆ, ಆದರೆ ಮೀಸೆ ಬಿಡದೇ ಗಡ್ಡ ಬಿಡುವವರು ಎಲ್ಲೆಡೆ ಭಯೋತ್ಪಾದನೆಯ ಪ್ರತಿರೂಪವಾಗಿ ಕಾಣುತ್ತಾರೆ’ ಎಂದು ರಿಝ್ವಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋದಲ್ಲಿ ಮಾತನಾಡಿರುವ ರಿಝ್ವಿ, ‘ಮೀಸೆ ಇಲ್ಲದೇ ಗಡ್ಡ ಬಿಡುವ ಮುಸ್ಲಿಮರು ಭಯ ಹುಟ್ಟಿಸುತ್ತಾರೆ. ಇಂಥ ಮುಸ್ಲಿಮರು ಮೂಲಭೂತವಾದಿಗಳಾಗಿದ್ದು, , ಜಗತ್ತಿನಾದ್ಯಂತ ಭಯೋತ್ಪಾದನೆ ಪಸರಿಸುವಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಎಲ್ಲೆಡೆ ಕುಖ್ಯಾತಿ ಪಡೆದಿದ್ದಾರೆ. ಮೀಸೆ ಇಲ್ಲದೇ ಗಡ್ಡ ಬಿಡುವ ಮೂಲಕ ಜನರಲ್ಲಿ ಭೀತಿ ಮೂಡಿಸುವುದೇ ಇವರ ಉದ್ದೇಶವಾಗಿದೆ’ ಎಂದು ರಿಝ್ವಿ ಹರಿಹಾಯ್ದಿದ್ದಾರೆ.
ಶರಿಯತ್ ಹೆಸರಲ್ಲಿ ಜನರ ಮೇಲೆ ಅರ್ಥಹೀನ ಫತ್ವಾಗಳನ್ನು ಹೊರಡಿಸುವುದೇ ಇಂಥ ಮುಸ್ಲಿಮರ ಕೆಲಸವಾಗಿದ್ದು, ಇಸ್ಲಾಮಿಗೂ ಇಂಥ ಕೆಲಸಗಳಿಗೂ ಯಾವ ಸಂಬಂಧವೂ ಇಲ್ಲ ಎಂದು ರಿಝ್ವಿ ಹೇಳಿದ್ದಾರೆ.
ಭಾರತೀಯ ಸಂವಿಧಾನದಿಂದ ಆಚೆಗೆ ಬಂದು ದೇಶದ ನಾಗರಿಕರಿಗೆ ಅನ್ವಯವಾಗುವ ಯಾವುದೇ ನೀತಿ ನಿಯಮಗಳನ್ನು ತರಲು ಆಗುವುದಿಲ್ಲ. ಫತ್ವಾಗಳನ್ನು ಹೊರಡಿಸುವ ಇಮಾಮರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ರಿಝ್ವಿ ಆಗ್ರಹಿಸಿದ್ದಾರೆ.
ಇದೇ ವೇಳೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರು ರಿಝ್ವಿ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಕೇಂದ್ರ ಸರ್ಕಾರ ರಿಝ್ವಿ ಅವರಿಗೆ ವೈ ಪ್ಲಸ್ ಭದ್ರತೆ ಒದಗಿಸಿದೆ. ರಾಮ ಮಂದಿರ ವಿಚಾರದಲ್ಲಿ ತೆಗೆದುಕೊಂಡಿರುವ ನಿಲುವಿನಿಂದ ತಾವು ಇಸ್ಲಾಮಿಕ್ ಮೂಲಭೂತವಾದಿಗಳ ಗುರಿಗೆ ಈಡಾಗಿರುವುದಾಗಿ ರಿಝ್ವಿ ಹೇಳಿದ್ದಾರೆ.
