ಜೈಪುರ್(ಮೇ.15): ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿ, ಗರ್ಭವತಿಯರಿಗಾಗಿ ಗಾಯತ್ರಿ ಮಂತ್ರ ಕೇಳಿಸುವ ಪರಿಪಾಠಕ್ಕೆ ಮುಸ್ಲಿಂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಕೋಣೆಯಲ್ಲಿ, ಹೆರಿಗೆ ಸಮಯದಲ್ಲಿ ಗರ್ಭವತಿಯರ ಮಾನಸಿಕ ಸ್ಥಿತಿ ಸ್ಥಿರವಾಗಿರಲು ಸಹಾಯಕಾರಿ ಎಂಬ ಕಾರಣಕ್ಕೆ ಗಾಯತ್ರಿ ಮಂತ್ರ  ಕೇಳಿಸಲಾಗುತ್ತಿದೆ.

ಆದರೆ ಈ ಪರಿಪಾಠಕ್ಕೆ ವಿರೋಧ ವ್ಯಕ್ತಪಡಿಸಿರುವ ಮುಸ್ಲಿಂ ಸಂಘಟನೆಗಳು, ಮುಸ್ಲಿಂ ಗರ್ಭವತಿಯರು ಈ ಮಂತ್ರವನ್ನು ಕೇಳುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಹರಿಹಾಯ್ದಿವೆ.

ಈ ಕುರಿತು ಆರೋಗ್ಯ ಸಚಿವ ರಘು ಶರ್ಮಾ ಅವರಿಗೆ ಲಿಖಿತ ದೂರು ನೀಡಿರುವ ಮುಸ್ಲಿಂ ಸಂಘಟನೆಗಳು, ಇಸ್ಲಾಂ ಪ್ರಕಾರ ಹುಟ್ಟಿದ ಮಗುವಿನ ಕಿವಿಗೆ ಮೊದಲು ಅಜಾನ್ ಕೇಳಿಸಬೇಕು ಹೀಗಾಗಿ ಮುಸ್ಲಿಂ ಗರ್ಭವತಿಯರು ಗಾಯತ್ರಿ ಮಂತ್ರ ಕೇಳಿಸಿವುದು ಸಲ್ಲ ಎಂದು ಕಿಡಿಕಾರಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯ ಇಲಾಖೆ, ಹೆರಿಗೆ ಕೋಣೆಯಲ್ಲಿ ಗರ್ಭವತಿಯರಿಗೆ ಗಾಯತ್ರಿ ಮಂತ್ರ ಕೇಳಿಸುವಂತೆ ಯಾವುದೇ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.