ಚಿಕ್ಕಮಗಳೂರು ಜಿಲ್ಲೆಯಲ್ಲಿ ತೆಂಗಿನಕಾಯಿ ತೆಗೆದುಕೊಂಡಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಸಖರಾಯಪಟ್ಟಣದ ಗೊಲ್ಲರಹಟ್ಟಿಯಲ್ಲಿ ನಡೆದ ಈ ಘಟನೆಯಲ್ಲಿ ಕುಮಾರ್ (37) ಎಂಬಾತ ಮೃತಪಟ್ಟಿದ್ದಾನೆ. ತೋಟದ ಮಾಲೀಕ ಮಧು ಎಂಬಾತ ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು (ಆ.20): ತೋಟದಲ್ಲಿ ಬಿದ್ದ ತೆಂಗಿನಕಾಯಿಯನ್ನು ತೆಗೆದುಕೊಂಡಿದ್ದಕ್ಕೆ ತೋಟದ ಮಾಲೀಕನೊಬ್ಬ ವ್ಯಕ್ತಿಯನ್ನು ಹೊಡೆದು ಕೊಂದಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ
ಮೃತ ದುರ್ದೈವಿ ಕುಮಾರ್ (37) ಎಂದು ಗುರುತಿಸಲಾಗಿದೆ. ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಕುಮಾರ್, ಪ್ರತಿನಿತ್ಯ ಹೊಲಕ್ಕೆ ಹೋಗುವ ದಾರಿಯಲ್ಲಿದ್ದ ಮಧು (37) ಎನ್ನುವವರ ಅವರ ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಹಿಂದೆ ಕೂಡ ಹಲವು ಬಾರಿ ಕುಮಾರ್‌ಗೆ ಎಚ್ಚರಿಕೆ ನೀಡಿದ್ದ ಮಧು, ನಿನ್ನೆ ಮತ್ತೊಮ್ಮೆ ಇದೇ ವಿಷಯಕ್ಕೆ ಕುಮಾರ್‌ಗೆ ಬುದ್ಧಿ ಹೇಳಿದ್ದಾರೆ. ಈ ವೇಳೆ, ಕುಮಾರ್ ಮಧುವಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಧು, ಕುಮಾರ್ ಮೇಲೆ ಗುದ್ದಲಿಯಿಂದ ಹಲ್ಲೆ ಮಾಡಿದ್ದಾನೆ.
ತೀವ್ರವಾಗಿ ಗಾಯಗೊಂಡ ಕುಮಾರ್ ರಕ್ತಸ್ರಾವದಿಂದ ನಿತ್ರಾಣಗೊಂಡು ಅಲ್ಲೇ ಬಿದ್ದಿದ್ದನು. ನಂತರ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಘಟನೆ ನಡೆದಾಗ ಕುಮಾರ್ ಮದ್ಯ ಸೇವಿಸಿ ಊಟ-ತಿಂಡಿ ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕೊಲೆ ಆರೋಪಿ ಮಧುವನ್ನು ಬಂಧಿಸಿದ್ದಾರೆ. ಸಣ್ಣ ವಿಷಯಕ್ಕೆ ನಡೆದ ಈ ಕೃತ್ಯ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.


