ಬೈಕಿನಲ್ಲಿ ಬಂದ ಐದು ಮಂದಿ ಮುಸುಕುಧಾರಿ ಆಗಂತುಕರು  ತಲವಾರು ದಾಳಿ ನಡೆಸಿ ವ್ಯಕ್ತಿಯೋರ್ವನ ಹತ್ಯೆ ನಡೆಸಿ, ಇನ್ನೋರ್ವನ  ಮೇಲೆ ದಾಳಿಗೈದು ಪರಾರಿಯಾದ ಘಟನೆ ಮಂಗಳೂರಿನ ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಗೇಟಿನ ಎದುರು ನಡೆದಿದೆ.

ಮಂಗಳೂರು(ಸ.05): ಬೈಕಿನಲ್ಲಿ ಬಂದ ಐದು ಮಂದಿ ಮುಸುಕುಧಾರಿ ಆಗಂತುಕರು ತಲವಾರು ದಾಳಿ ನಡೆಸಿ ವ್ಯಕ್ತಿಯೋರ್ವನ ಹತ್ಯೆ ನಡೆಸಿ, ಇನ್ನೋರ್ವನ ಮೇಲೆ ದಾಳಿಗೈದು ಪರಾರಿಯಾದ ಘಟನೆ ಮಂಗಳೂರಿನ ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಗೇಟಿನ ಎದುರು ನಡೆದಿದೆ.

ನಿನ್ನೆ ತಡರಾತ್ರಿ ವೇಳೆ ಹಂತಕರ ತಲವಾರನಿಂದ ನಡೆಸಿರುವ ದಾಳಿ ಸ್ಥಳೀಯ ಮಸೀದಿಯ ಸಿಸಿ ಕ್ಯಾಮಾರದಲ್ಲಿ ದಾಖಲಾಗಿದೆ. ಬೈಕಿನಲ್ಲಿ ಅಡ್ಡಗಟ್ಟಿದ ಹಂತಕರು ಯದ್ವಾತದ್ವಾ ಕೊಚ್ಚಿ ಕೊಲೆ ಮಾಡಿದ್ದಾರೆ. ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಜುಬೈರ್ ಹತ್ಯೆಯಾದ ವ್ಯಕ್ತಿ. ಜತೆಗಿದ್ದ ಮಾರ್ಗತಲೆ ನಿವಾಸಿ ಇಲ್ಯಾಸ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದಂತೆ ಎರಡು ಬೈಕಿನಲ್ಲಿ ಬಂದ ಐವರು ಆಗಂತುಕರು ತಲವಾರಿನಿಂದ ಜುಬೈರ್ ಅವರ ತಲೆಯ ಭಾಗಕ್ಕೆ ಕಡಿದಿದ್ದಾರೆ. ಇದನ್ನು ಇಲ್ಯಾಸ್ ಅವರು ತಡೆಯಲು ಬಂದಾಗ ಅವರ ಕೈ ಮತ್ತು ಕಾಲಿನ ಭಾಗಕ್ಕೆ ಇಬ್ಬರು ಕಡಿದು , ಬೈಕಿನ ಮೂಲಕ ಪರಾರಿಯಾಗಿದ್ದಾರೆ. ಉಳ್ಳಾಲದ ಫಿಶ್‍ಮಿಲ್‍ನಲ್ಲಿ ಇಲೆಕ್ಟ್ರೀಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜುಬೈರ್ ವಿವಾಹಿತರಾಗಿದ್ದು, ನಾಲ್ವರು ಶಾಲೆ ಕಲಿಯುವ ಮಕ್ಕಳಿದ್ದಾರೆ.

ಹತ್ಯೆಗೀಡಾದ ಜುಬೈರ್ ಈವರೆಗೂ ಯಾವುದೇ ಸಂಘಟನೆಗಳಲ್ಲಿ ತೊಡಗಿಸಿಕೊಂಡಿಲ್ಲ ಎನ್ನಲಾಗಿದೆ. 

ಆದರೆ ಜುಬೈರ್ ಜತೆಗಿದ್ದ ದಾವುದ್ ಎಂಬವರ ಮೇಲೆ ನಟೋರಿಯಸ್ ರೌಡಿ ಅಲ್ತಾಫ್ ಮತ್ತು ಸುಹೈಲ್ ಎಂಬಾತನ ತಂಡ ಹಲ್ಲೆ ನಡೆಸಿತ್ತು. ಈ ಕುರಿತ ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆಯುತ್ತಿದೆ. ಪ್ರಕರಣ ಹಿಂಪಡೆಯುವಂತೆ ಅಲ್ತಾಫ್ ಆಗಾಗ್ಗ ಜುಬೈರ್ ಅವರಿಗೆ ಬೆದರಿಕೆಯೊಡ್ಡುತ್ತಿದ್ದ.

ವರ್ಷದ ಹಿಂದೆ ಗೂಂಡಾ ಕಾಯ್ದೆಯಡಿ ಬಂಧಿತನಾದ ಅಲ್ತಾಫ್ ಜೈಲಿನಲ್ಲಿದ್ದರೂ, ಸಹಚರರ ಮೂಲಕ ಜುಬೈರ್ ಬಳಿ ಪ್ರಕರಣ ಹಿಂಪಡೆಯುವಂತೆ ಬೆದರಿಕೆಯನ್ನು ನಿರಂತರವಾಗಿ ಹಾಕುತ್ತಲೇ ಬಂದಿದ್ದರು. ಆದರೆ ಜಬ್ಬಾರ್ ಇದಕ್ಕೆ ತಲೆಕಡೆಸಿಕೊಂಡಿರಲಿಲ್ಲ. ಇದೇ ದ್ವೇಷಕ್ಕೆ ಸಂಬಂಧಿಸಿ ಹತ್ಯೆ ನಡೆದಿರುವ ಶಂಕೆ ಇದೆ.