ಮರಾಠಾ ಮೀಸಲಾತಿ ಹೋರಾಟ: ಮಹಾರಾಷ್ಟ್ರ ಪ್ರಕ್ಷುಬ್ದ!

First Published 25, Jul 2018, 2:38 PM IST
Mumbai-Pune Expressway Blocked, Trains Stopped Amid Bandh
Highlights

ಇವರು ಕೊಡುತ್ತಿಲ್ಲ, ಅವರು ಬಿಡುತ್ತಿಲ್ಲ

ತೀವ್ರಗೊಂಡ ಮರಾಠಾ ಮೀಸಲಾತಿ ಹೋರಾಟ

ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಪ್ರತಿಭಟನಾಕಾರ

ಮಹಾರಾಷ್ಟ್ರ ಬಂದ್ ಗೆ ಸಂಘಟನೆಗಳ ಕರೆ

ಹಿಂಸಾರೂಪಕ್ಕೆ ತಿರುಗಿದ ಮೀಸಲಾತಿ ಹೋರಾಟ

ಮುಂಬೈ(ಜು.25): ಮರಾಠಾ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತಿಭಟನಾಕಾರನೊಬ್ಬ ಮೃತಪಟ್ಟಿದ್ದಾನೆ. ಮುಂಬೈ-ಪುಣೆ ಎಕ್ಸಪ್ರೆಸ್ ಹೈವೇಯನ್ನು ಪ್ರತಿಭಟನಕಾರರು ಸಂಪೂರ್ಣ ಬಂದ್ ಮಾಡಿದ್ದಾರೆ.

ಪ್ರತಿಭಟನೆ ವೇಳೆ ಮರಾಠಾ ಸಮುದಾಯದ ಸದಸ್ಯ ಜಗನ್ನಾಥ್ ಸೊನಾವ್ನೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಔರಂಗಾಬಾದ್ ಜಿಲ್ಲೆಯಲ್ಲೂ ಮತ್ತೊಬ್ಬ ಪ್ರತಿಭಟನಾಕಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಈ ಘಟನೆಗಳಿಂದ ಮಹಾರಾಷ್ಟ್ರದ ಹಲವೆಡೆ ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಮಹಾರಾಷ್ಟ್ರದಲ್ಲಿಂದು ಬಂದ್ ಆಚರಿಸಲಾಗುತ್ತಿದೆ. ಈ ನಡುವೆ ಮರಾಠಾ ಸಮುದಾಯದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಓರ್ವ ಪೇದೆ ಸಾವನ್ನಪ್ಪಿ, ಇತರೆ 13 ಮಂದಿ ಪೇದೆಗಳು ಗಾಯಗೊಂಡಿದ್ದಾರೆ.

ಮೀಸಲು ಒದಗಿಸದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಬೇಕು ಹಾಗೂ ಮರಾಠಾ ಸಮುದಾಯದಲ್ಲಿ ಕ್ಷಮೆಯಾಚಿಸಬೇಕೆಂದು ಮರಾಠಾ ಮೀಸಲು ಹೋರಾಟ ಸಮಿತಿ ಮುಖಂಡ ರವೀಂದ್ರ ಪಾಟೀಲ್ ಆಗ್ರಹಿಸಿದ್ದಾರೆ.

ಬಂದ್ ಹಿನ್ನೆಲೆ ರಾಜ್ಯದಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಶಾಲಾ-ಕಾಲೇಜುಗಳಿಗೆ ಆಯಾ ಸ್ಥಳೀಯ ಪರಿಸ್ಥಿತಿಗಳಿಗೆ ಅನುಸರಿಸಿ ರಜೆ ನೀಡುವಂತೆ ಸರ್ಕಾರ ಜಿಲ್ಲಾಡಳಿಗಳಿಗೆ ಸೂಚನೆ ನೀಡಿದೆ. ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ಫಡ್ನವೀಸ್ ತಮ್ಮ ಪಂಢರಪುರ ವಿಠ್ಠಲನ ದರ್ಶನ ರದ್ದುಗೊಳಿಸಿದ್ಧಾರೆ.

loader