ಮುಂಬೈ (ಮಾ. 09): ರಾಷ್ಟ್ರದ ವಾಣಿಜ್ಯ ನಗರಿ ಮುಂಬೈನಲ್ಲಿ ವ್ಯಕ್ತಿಯೊಬ್ಬರ ಮೂರನೇ ಪತ್ನಿಯನ್ನು ಆತನ ಎರಡನೇ ಪತ್ನಿ ಹಾಗೂ ಆತನ ಮೊದಲ ಪತ್ನಿಯ ಇಬ್ಬರು ಹೆಣ್ಣು ಮಕ್ಕಳ ಸಹಕಾರದಿಂದ ಹತ್ಯೆಗೈದಿರುವ ವಿಚಿತ್ರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು, ಈ ದುಷ್ಕೃತ್ಯವೆಸಗಿದ ವ್ಯಕ್ತಿಯ 2ನೇ ಪತ್ನಿ ಹಾಗೂ ಇದಕ್ಕೆ ಸಹಕಾರ ನೀಡಿದ ಇತರ ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ, 3ನೇ ಮದುವೆಯಾದ ಬಳಿಕ ಗಂಡ, ತಮಗೆ ಹಣಕಾಸು ನೆರವು ಸೇರಿದಂತೆ ಯಾವುದೇ ಸಹಾಯ ಮಾಡದೇ ಇದ್ದಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಮುಂಬೈನ ನಲ್ಲ ಸೊಪಾರದಲ್ಲಿನ ಮಾಲ್‌ವೊಂದರ ಬಳಿ ಬ್ಲಾಂಕೆಟ್‌ನಲ್ಲಿ ಸುತ್ತಿ ಬಿಸಾಡಲಾಗಿದ್ದ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ಹತ್ಯೆಗೀಡಾದ ಮಹಿಳೆಯನ್ನು ಗುತ್ತಿಗೆದಾರ ಕೆಲಸ ಮಾಡುತ್ತಿದ್ದ ಸುಶಿಲ್‌ ಮಿಶ್ರಾ(45) ಎಂಬಾತನ 3ನೇ ಪತ್ನಿಯಾದ ಯೋಗಿತಾ(35) ಎಂಬುದನ್ನು ಪತ್ತೆ ಮಾಡಿದ್ದರು. ಆ ಬಳಿಕ ಮಿಶ್ರಾ ಮತ್ತು ಆತನ ಇಬ್ಬರು ಮಡದಿಯರನ್ನು ಕರೆಸಿ ವಿಚಾರಣೆ ನಡೆಸಿದ್ದರು.

ಪಾರ್ವತಿ ಮಾನೆ ಎಂಬಾಕೆಯನ್ನು 2017ರಲ್ಲಿ ವಿವಾಹವಾಗಿದ್ದ ಮಿಶ್ರಾ ಅವರು ತಮ್ಮ ಮೊದಲ ಪತ್ನಿಯ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಡಾನ್‌ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದರು. ಆದರೆ, ಕಳೆದ ವರ್ಷವಷ್ಟೇ ಯೋಗಿತಾ ಎಂಬಾಕೆ ಜೊತೆ ಮಿಶ್ರಾ 3ನೇ ವಿವಾಹವಾದರು. ಆ ನಂತರ, ಪಾರ್ವತಿ ಮಾನೆಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸಿದರು. ಇದರಿಂದಾಗಿ ಪತಿ ಬಗ್ಗೆ ಮಾನೆ ತೀವ್ರ ಆಕ್ರೋಶಗೊಂಡಿದ್ದರು.

ಏತನ್ಮಧ್ಯೆ, ಮಿಶ್ರಾ ಅವರು ತಮ್ಮ ವ್ಯವಹಾರ ನಿಮಿತ್ತ ಫೆ.28ಕ್ಕೆ ಗುಜರಾತ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಿಶ್ರಾ ಅವರ ಮೊದಲ ಪತ್ನಿಯ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗಳ ಬಾಯ್‌ಫ್ರೆಂಡ್‌ ಜೊತೆ ಬಂದ ಮಾನೆ, ಯೋಗಿತಾಳ ಕತ್ತು ಹಿಸುಕಿ ಹತ್ಯೆಗೈದಿದ್ದರು. ನಂತರ, ಮೃತ ದೇಹವನ್ನು ಬ್ಲಾಂಕೆಟ್‌ನಲ್ಲಿ ಸುತ್ತಿ ಮಾಲ್‌ ಪಕ್ಕ ಎಸೆದು ಬಂದಿದ್ದರು. ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.