ಮುಂಬೈ[ಅ.05]: ಮೆಟ್ರೋ ಶೆಡ್‌ ನಿರ್ಮಾಣಕ್ಕಾಗಿ ಗೋರೆಗಾಂವ್‌ನ ಆರೇ ಕಾಲೋನಿಯಲ್ಲಿರುವ 2,600ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಬಾರದು ಎಂದು ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಬಾಂಬೇ ಹೈಕೋರ್ಟ್‌ ವಜಾಗೊಳಿಸಿದೆ. ಈ ಮೂಲಕ ಮುಂಬೈ ಮಹಾನಗರ ಪಾಲಿಕೆ ಮರಗಳನ್ನು ತೆರವುಗೊಳಿಸಲು ಮುಂಬೈ ಮೆಟ್ರೋ ಕಾರ್ಪೊರೇಷನ್‌ಗೆ ನೀಡಿದ್ದ ಪರವಾನಿಗೆ ನಿರ್ಧಾರವನ್ನು ಎತ್ತಿ ಹಿಡಿದಿದೆ.

ಆರೇ ಕಾಲೋನಿ ಈಗ ಹಸಿರಿನಿಂದ ಕೂಡಿಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಮಹಾನಗರ ಪಾಲಿಕೆ ನಿರ್ಧಾರದ ವಿರುದ್ಧ ಕೆಲ ಎನ್‌ಜಿಒ ಮತ್ತು ಪರಿಸರ ಪ್ರೇಮಿಗಳು ಮರಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿದ್ದವು. ಈ ಸಂಬಂಧ ಕೋರ್ಟ್‌ ಮೆಟ್ಟಿಲೇರಿದ್ದವು.

ಅಲ್ಲದೆ, ಪಾಲಿಕೆ ನಿರ್ಧಾರ ವಿರೋಧಿಸಿ ಶಿವಸೇನಾ ಕಾರ್ಪೊರೇಟರ್‌ ಯಶವಂತ್‌ ಜಾಧವ್‌ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿ, 50,000 ದಂಡ ವಿಧಿಸಿದೆ.