ಸರ್ಕಾರ ಸಿನಿಮಾ ಮಂದಿಯನ್ನು ಏಪ್ರಿಲ್‌ ಫäಲ್‌ ಮಾಡಿದೆ. ಏಪ್ರಿಲ್‌ 1ರಿಂದ ಎಲ್ಲಾ ಮಲ್ಟಿಪ್ಲೆಕ್ಸುಗಳ ಗರಿಷ್ಠ ಪ್ರವೇಶ ದರ 200 ರುಪಾಯಿ ಮೀರುವಂತಿಲ್ಲ ಎಂಬ ಬಜೆಟ್‌ ಪ್ರಸ್ತಾಪವನ್ನು ನಂಬಿಕೊಂಡು ಚಿತ್ರಮಂದಿರಕ್ಕೆ ಹೋದವರಿಗೆ ಆಘಾತ ಕಾದಿತ್ತು. ಮಲ್ಟಿಪ್ಲೆಕ್ಸ್‌ ಪ್ರವೇಶ ದರದಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಪರಭಾಷಾ ಚಿತ್ರಗಳ ಪ್ರವೇಶ ದರ ಎಂದಿನಂತೆಯೇ 400, 500 ರುಪಾಯಿ ಇತ್ತು. ವಾರಾಂತ್ಯದಲ್ಲಿ ಕನ್ನಡ ಚಿತ್ರಗಳ ದರವೂ ದುಪ್ಪಟ್ಟಾಗಿದ್ದನ್ನು ಕಂಡ ಪ್ರೇಕ್ಷಕರು ಗೊಂದಲಗೊಂಡಿದ್ದಾರೆ.

ಬೆಂಗಳೂರು(ಎ.02): ಸರ್ಕಾರ ಸಿನಿಮಾ ಮಂದಿಯನ್ನು ಏಪ್ರಿಲ್‌ ಫäಲ್‌ ಮಾಡಿದೆ. ಏಪ್ರಿಲ್‌ 1ರಿಂದ ಎಲ್ಲಾ ಮಲ್ಟಿಪ್ಲೆಕ್ಸುಗಳ ಗರಿಷ್ಠ ಪ್ರವೇಶ ದರ 200 ರುಪಾಯಿ ಮೀರುವಂತಿಲ್ಲ ಎಂಬ ಬಜೆಟ್‌ ಪ್ರಸ್ತಾಪವನ್ನು ನಂಬಿಕೊಂಡು ಚಿತ್ರಮಂದಿರಕ್ಕೆ ಹೋದವರಿಗೆ ಆಘಾತ ಕಾದಿತ್ತು. ಮಲ್ಟಿಪ್ಲೆಕ್ಸ್‌ ಪ್ರವೇಶ ದರದಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಪರಭಾಷಾ ಚಿತ್ರಗಳ ಪ್ರವೇಶ ದರ ಎಂದಿನಂತೆಯೇ 400, 500 ರುಪಾಯಿ ಇತ್ತು. ವಾರಾಂತ್ಯದಲ್ಲಿ ಕನ್ನಡ ಚಿತ್ರಗಳ ದರವೂ ದುಪ್ಪಟ್ಟಾಗಿದ್ದನ್ನು ಕಂಡ ಪ್ರೇಕ್ಷಕರು ಗೊಂದಲಗೊಂಡಿದ್ದಾರೆ.

ಬಜೆಟ್‌ ಪ್ರಸ್ತಾಪದಲ್ಲಿ ಸರ್ಕಾರ ಮಲ್ಟಿಪ್ಲೆಕ್ಸ್‌ ದರಕ್ಕೆ ಕಡಿವಾಣ ಹಾಕಿದಾಗ ಚಿತ್ರರಂಗ ಸಂಭ್ರಮ ಆಚರಿಸಿತ್ತು. ಏಪ್ರಿಲ್‌ ಒಂದರಿಂದಲೇ ಇತರ ಹೊಸ ನೀತಿ ನಿಯಮಾವಳಿಗಳ ಜೊತೆ ಈ ಹೊಸ ಪ್ರವೇಶ ದರ ನೀತಿಯೂ ಜಾರಿಗೆ ಬರುತ್ತದೆ ಎಂದು ಚಿತ್ರರಂಗ ನಿರೀಕ್ಷಿಸಿತು. ಆದರೆ, ಈ ಏಕರೂಪ ದರ ಸದ್ಯಕ್ಕೆ ಜಾರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ ಇದು ಕೇವಲ ಬಜೆಟ್‌ನ ಪ್ರಸ್ತಾಪವಷ್ಟೆಎನ್ನುತ್ತಿರುವ ಸರ್ಕಾರಿ ಮೂಲಗಳು, ಇದೊಂದು ನೀತಿಯಾಗಿ ಅಥವಾ ಕಾನೂನು ರೂಪ ಪಡೆಯುವುದಕ್ಕೆ ಕನಿಷ್ಠ ಎರಡರಿಂದ ಮೂರು ತಿಂಗಳು ಬೇಕಾಗುತ್ತದೆ ಎನ್ನುತ್ತಿವೆ. ಹೀಗಾಗಿ ‘ಬಾಹುಬಲಿ' ಸೇರಿದಂತೆ ಹಲವು ಬಿಗ್‌ ಬಜೆಟ್‌ ಚಿತ್ರಗಳನ್ನು ಕೇವಲ 200 ರುಪಾಯಿನಲ್ಲಿ ನೋಡುವ ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಸದ್ಯಕ್ಕೆ ನಿರಾಸೆ ಎದುರಾಗಲಿದೆ.

ಎಲ್ಲ ಮಲ್ಪಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲೂ ಹಿಂದಿನ ಪ್ರವೇಶ ದರವನ್ನೇ ಅನುಸರಿಸಲಾಗುತ್ತಿದೆ. ಅಲ್ಲದೆ ಕನಿಷ್ಠ ಒಂದು ಪರದೆಯಲ್ಲಿ ದಿನಕ್ಕೆ ಎರಡು ಕನ್ನಡ ಚಿತ್ರಗಳ ಪ್ರದರ್ಶನವನ್ನು ಕಡ್ಡಾಯ ಮಾಡಲಾಗಿತ್ತು. ಈ ನೀತಿ ಇದೇ ತಿಂಗಳು ಏಪ್ರಿಲ್‌ 1 ರಿಂದ ಜಾರಿಗೆ ಬರುತ್ತದೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಸರ್ಕಾರದ ಈ ಆದೇಶಕ್ಕೆ ಮಲ್ಪಿಪ್ಲೆಕ್ಸ್‌ಗಳು ಕಿವಿ ಕೊಟ್ಟಿಲ್ಲ. ಈ ಬಗ್ಗೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ನಿರ್ದೇಶಕ ವಿಶುಕುಮಾರ್‌ ಹೇಳುವುದು ಹೀಗೆ: ‘ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಏಕರೀತಿ ದರ ನಿಗದಿ ಮಾಡಿರುವುದು ನಿಜ. ಆದರೆ, ಹಣಕಾಸು ಹಾಗೂ ಕಾನೂನು ಇಲಾಖೆಯಲ್ಲಿ ನೀತಿಯಾಗಿ ರೂಪುಗೊಳ್ಳಬೇಕು. ನಮ್ಮ ಇಲಾಖೆಯಿಂದ ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಈ ಎರಡೂ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಮ್ಮ ಇಲಾಖೆ ಸಲ್ಲಿಸಿದ ಪ್ರಸ್ತಾವನೆಯನ್ನು ಮುಂದಿಟ್ಟುಕೊಂಡು ಹಣಕಾಸು ಹಾಗೂ ಕಾನೂನು ಇಲಾಖೆ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದೆ'.

ಪ್ರೇಕ್ಷಕರೇ ಗಮನಿಸಿ, ಈ ಎಲ್ಲ ಕೆಲಸಗಳಿಗೆ ಕನಿಷ್ಠ ಎರಡು ತಿಂಗಳಾದರೂ ಬೇಕಾಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಅವರ 200 ರುಪಾಯಿ ಟಿಕೆಟ್‌ ಭಾಗ್ಯ ಯೋಜನೆ ಸದ್ಯಕ್ಕೆ ನಿಮಗೆ ದಕ್ಕುವ ಸೂಚನೆಗಳಿಲ್ಲ.

ವರದಿ: ಕನ್ನಡಪ್ರಭ