ನವದೆಹಲಿ(ಫೆ.13): ಒಂದು ಕಡೆ ಎಸ್ ಪಿ ಮಖ್ಯಸ್ಥ ಅಖಿಲೇಶ್ ಯಾದವ್ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿಯವರೊಂದಿಗೆ ಮೈತ್ರಿ ಮಾಡಿಕೊಂಡು ಪ್ರಧಾನಿ ಮೋದಿ ವಿರುದ್ಧ ಘಜಿರ್ಜಿಸುತ್ತಿದ್ದಾರೆ.

ಮತ್ತೊಂದು ಕಡೆ ಅಖಿಲೇಶ್ ತಂದೆ ಮುಲಾಯಂ ಸಿಂಗ್ ಯಾದವ್, 2019ರಲ್ಲೂ ಮೋದಿ ಅವರೇ ಪ್ರಧಾನಿಯಾಗಲಿ ಎಂದು ಹಾರೈಸುತ್ತಿದ್ದಾರೆ.

ಹೌದು, 2019ರಲ್ಲೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ, ಆ ತಾಕತ್ತು ಇರುವುದು ಅವರೊಬ್ಬರಿಗೆ ಮಾತ್ರ ಎಂದು ಲೋಕಸಭೆಯಲ್ಲಿ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್, ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಆರಿಸಿ ಬರಲಿ. ಪ್ರಧಾನಿ ಮೋದಿ ಸಮೇತ ಲೋಕಸಭೆಗೆ ಇದೇ ಸಂಸದರು ಮತ್ತೊಮ್ಮೆ ಆರಿಸಿ ಬರಲಿ ಎಂದು ಹಾರೈಸಿದರು.

ಇನ್ನು ಮುಲಾಯಂ ಹೇಳಿಕೆಯಿಂದ ಪ್ರತಿಪಕ್ಷಗಳ ನಾಯಕರಲ್ಲಿ ಗೊಂದಲ ಉಂಟಾದರೆ, ಪ್ರಧಾನಿ ಮೋದಿ ಮಾತ್ರ ಹಸನ್ಮುಖರಾಗಿ ಮುಲಾಯಂ ಸಿಂಗ್ ಅವರಿಗೆ ನಮಸ್ಕರಿಸಿ ಧನ್ಯವಾದ ಅರ್ಪಿಸಿದರು.

ಲೋಕಸಭೆಗೂ ಮುನ್ನ ಮುಲಾಯಂ ಸಿಂಗ್ ಯಾದವ್ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿರೋಧಿ ಪಕ್ಷದಲ್ಲಿದ್ದು ಪ್ರಧಾನಿ ಅವರನ್ನು ಹೊಗಳಿರುವುದು ಮಹಾಘಟಬಂದನ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.