ದೋಚಿದ್ದ ಹಣ ವಾಪಸ್‌ ಕೇಳಿದ್ದ ಆಟ್ರೋ ಡ್ರೈವರ್‌ಗೆ ದುಷ್ಕರ್ಮಿಗಳು ಮಾಡಿದ್ದೇನು ಗೊತ್ತಾ?

ಬೆಂಗಳೂರು, [ಅ.13]: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸುಲಿಗೆಕೋರರ ಹಾವಳಿ ಹೆಚ್ಚಾಗಿದೆ.

ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿದ್ದ ದುಷ್ಕರ್ಮಿಗಳಿಬ್ಬರು ಪೆಟ್ರೋಲ್‌ ಸುರಿದು ಆಟೋ ಚಾಲಕನ ದರೋಡೆ ಮಾಡಿರುವ ಪ್ರಕರಣ ಕೇಂದ್ರ ವಿಭಾಗದ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯಲ್ಲಿ ರಿಚ್‌ಮಂಡ್‌ ಟೌನ್‌ ನಿವಾಸಿ ಮೊಹಮ್ಮದ್‌ ಆಸೀಫ್‌ (28) ಅವರ ಎಡಗೈಗೆ ಗಂಭೀರ ಸುಟ್ಟಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಫೇಸ್‌ಬುಕ್ ಗೆಳೆತನ: ಇರಲಿ ಎಚ್ಚರ..!

ಆಟೋ ಚಾಲಕ ಆಸೀಫ್‌ ಗುರುವಾರ ರಾತ್ರಿ 1ರ ಸುಮಾರಿಗೆ ಆಟೋ ನಿಲ್ಲಿಸಿಕೊಂಡು ಮಲಗಿದ್ದರು. ಸ್ಥಳಕ್ಕೆ ಬಂದ ಇಬ್ಬರು ದುಷ್ಕರ್ಮಿಗಳು ಈಜಿಪುರ ವೃತ್ತಕ್ಕೆ ಹೋಗಬೇಕು ಎಂದು ಆಸೀಫ್‌ನನ್ನು ಎಬ್ಬಿಸಿದ್ದರು. 

ವಿವೇಕನಗರದ ಓಆರ್‌ಸಿ ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಂತೆ ದುಷ್ಕರ್ಮಿಗಳು ಸಿಗರೇಟ್‌ ಸೇದಲು ಆಸೀಫ್‌ನಿಂದ ಬೆಂಕಿ ಪೊಟ್ಟಣ ಪಡೆದಿದ್ದರು. ಸ್ವಲ್ಪ ದೂರು ಹೋಗುತ್ತಿದ್ದಂತೆ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದರು.

ಅದರಂತೆ ಚಾಲಕ ಆಸೀಫ್‌ ಆಟೋ ನಿಲ್ಲಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಆಸೀಫ್‌ ಬಳಿ ಸುಲಿಗೆ ಮಾಡಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. 

ಈ ವೇಳೆ ದುಷ್ಕರ್ಮಿಗಳು ಚಾಲಕನ ಮೇಲೆ ಹಲ್ಲೆ ನಡೆಸಿ 500 ರು. ನಗದು, ಮೊಬೈಲ್‌ ಹಾಗೂ ಪರ್ಸ್‌ ಕಸಿದು ಪರಾರಿಯಾಗಲು ಯತ್ನಿಸಿದ್ದರು. ಆದರೂ ಬಿಡದ ಆಸೀಫ್‌ ದುಷ್ಕರ್ಮಿಗಳನ್ನು ಅಡ್ಡ ಹಾಕಿ ಹಣ ವಾಪಸ್‌ ಪಡೆಯಲು ಯತ್ನಿಸಿದ್ದಾರೆ. 

ಇದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳಿಬ್ಬರು ಮನಸೋ ಇಚ್ಛೆ ಚಾಲಕನನ್ನು ಥಳಿಸಿದ್ದಾರೆ. ಬಳಿಕ ಕೆಳಗೆ ಬಿದ್ದ ಆಸೀಫ್‌ ಎಡಗೈ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ಸ್ಥಳದಿಂದ ಪರಾರಿಯಾಗಿದ್ದಾರೆ.

ಸುಟ್ಟು ಗಾಯಗಳಿಂದ ಆಸೀಫ್‌ ಸಹಾಯಕ್ಕಾಗಿ ಕೂಗಾಡಿದ್ದು, ಆ ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಕೂಡಲೇ ಆಸೀಫ್‌ನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. 

ವಿಕ್ಟೋರಿ ಆಸ್ಪತ್ರೆಯ ಆವರಣದಲ್ಲಿನ ಹಾಗೂ ಘಟನೆ ನಡೆದ ಸ್ಥಳದ ಸಿಸಿಟಿವಿ ಕ್ಯಾಮೆರಾ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳು ಪೂರ್ವಸಂಚಿನಂತೆ ಎಲ್ಲಿಯೂ ಪೆಟ್ರೋಲ್‌ ಖರೀದಿ ಮಾಡಿ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.