ಫೇಸ್‌ಬುಕ್ ಗೆಳೆತನ ಮಾಡುವವರು ಎಚ್ಚರದಿಂದ ಇರುವುದು ಒಳಿತು. ಸ್ವಲ್ಪವೂ ಯಾಮಾರಿದ್ರೆ ಏನಾಗುತ್ತೆ ಎನ್ನುವುದಕ್ಕೆ ಈ ಸ್ಟೋರಿ ಓದಿ.

ಬೆಂಗಳೂರು, [ಅ. 13]: ಫೇಸ್‌ಬುಕ್ ಗೆಳೆತನ ಮಾಡುವವರು ಎಚ್ಚರದಿಂದ ಇರುವುದು ಒಳಿತು. ಇಲ್ಲದಿದ್ದರೇ ಪಂಗನಾಮ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.

ತನ್ನ ಫೇಸ್‌ಬುಕ್‌ ಗೆಳತಿಗೆ ಆದಾಯ ತೆರಿಗೆ (ಐಟಿ) ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಚಾಲಾಕಿಯೊಬ್ಬನನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮ್ಯಾಲಪಟ್ಟು ಗ್ರಾಮದ ನವೀನ್‌ ಕುಮಾರ್‌ ಬಂಧಿತನಾಗಿದ್ದು, ಆರೋಪಿಯಿಂದ 2 ಸಿಮ್‌ ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಸ್ನೇಹಿತೆಗೆ ಐಟಿ ಅಧಿಕಾರಿ ಆಸೆ ತೋರಿಸಿ ಆಕೆಯಿಂದ 5.6 ಲಕ್ಷ ಪಡೆದು ಆರೋಪಿ ಟೋಪಿ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಚಿತ್ತೂರು ಜಿಲ್ಲೆಯ ನವೀನ್‌, ಫೇಸ್‌ಬುಕ್‌ನಲ್ಲಿ ಆರ್‌.ಟಿ.ನಗರದ ಹೆಲ್ತ್‌ ಕ್ಲಬ್‌ವೊಂದರ ಮಹಿಳಾ ಇನ್ಸ್‌ಸ್ಟ್ರಕ್ಟರ್‌ ಪರಿಚಯವಾಗಿದೆ. ಹೀಗೆ ಅನೌಪಚಾರಿಕ ಮಾತುಕತೆ ಬಳಿಕ ಅವರಿಬ್ಬರು ಆತ್ಮೀಯರಾಗಿದ್ದರು. ಆಗ ತನಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಸ್ನೇಹವಿದೆ ಎಂದು ಗೆಳತಿ ಮುಂದೆ ಆತ ಕೊಚ್ಚಿಕೊಂಡಿದ್ದ. ಈ ಮಾತು ನಂಬಿದ ಆಕೆ, ತನಗೆ ಎಲ್ಲಾದರೂ ಕೆಲಸ ಕೊಡಿಸುವಂತೆ ಹೇಳಿದ್ದಳು. 

ಆಗ ಐಟಿ ಕಂಪನಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಆಫೀಸರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿದ ಆತ, ಇದಕ್ಕೆ ಸ್ಪಲ್ಪ ಹಣ ಖರ್ಚಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದ. ಈ ಪ್ರಸ್ತಾಪಕ್ಕೆ ಒಪ್ಪಿದ ಬಳಿಕ ಗೆಳತಿಯಿಂದ ಆರೋಪಿ ತನ್ನ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮೂಲಕ ಹಂತ ಹಂತವಾಗಿ 11 ಬಾರಿಯಂತೆ ಒಟ್ಟು .5.6 ಲಕ್ಷ ವರ್ಗಾಯಿಸಿಕೊಂಡಿದ್ದ.

 ಈ ಸಂದಾಯವಾದ ನಂತರ ಆರೋಪಿಯು ಸ್ನೇಹಿತೆ ಸಂಪರ್ಕ ಕಡಿತಗೊಳಿಸಿದ್ದ. ಹಲವು ಬಾರಿ ಆತನ ಮೊಬೈಲ್‌ಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಆಕೆ, ಕೊನೆಗೆ ತಾವು ವಂಚನೆಗೊಳಗಾಗಿರುವುದು ಅರಿವಾಗಿದೆ.

ಬಳಿಕ ಸೆ.24 ರಂದು ಸೈಬರ್‌ ಠಾಣೆಗೆ ದೂರು ಕೊಟ್ಟಿದ್ದರು. ಅದರಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.