ಸಾಲ ಮನ್ನಾ, ಸಾಲ ವಿತರಣೆ ಗುರಿ ನಿಗದಿ ಹಾಗೂ ಮುದ್ರಾ ಯೋಜನೆಗಳು ಮುಂದಿನ ಬ್ಯಾಂಕಿಂಗ್‌ ಬಿಕ್ಕಟ್ಟಿಗೆ ಕಾರಣವಾಗಬಲ್ಲವು ಎಂದು ರಿಸರ್ವ್ ಬ್ಯಾಂಕಿನ ನಿವೃತ್ತ ಗವರ್ನರ್‌ ಹಾಗೂ ಪ್ರಸಿದ್ಧ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್‌ ಎಚ್ಚರಿಸಿದ್ದಾರೆ. 

ನವದೆಹಲಿ: ಮರುಪಾವತಿಯಾಗದ ಸಾಲದಿಂದಾಗಿ ಭಾರತೀಯ ಬ್ಯಾಂಕುಗಳು ಸಮಸ್ಯೆಗೆ ಸಿಲುಕಿರುವಾಗಲೇ, ಸಾಲ ಮನ್ನಾ, ಸಾಲ ವಿತರಣೆ ಗುರಿ ನಿಗದಿ ಹಾಗೂ ಮುದ್ರಾ ಯೋಜನೆಗಳು ಮುಂದಿನ ಬ್ಯಾಂಕಿಂಗ್‌ ಬಿಕ್ಕಟ್ಟಿಗೆ ಕಾರಣವಾಗಬಲ್ಲವು ಎಂದು ರಿಸರ್ವ್ ಬ್ಯಾಂಕಿನ ನಿವೃತ್ತ ಗವರ್ನರ್‌ ಹಾಗೂ ಪ್ರಸಿದ್ಧ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್‌ ಎಚ್ಚರಿಸಿದ್ದಾರೆ.

ಬ್ಯಾಂಕುಗಳ ಎನ್‌ಪಿಎ (ಅನುತ್ಪಾದಕ ಆಸ್ತಿ) ಕುರಿತಂತೆ ಸಂಸದೀಯ ಅಂದಾಜು ಸಮಿತಿಗೆ ಟಿಪ್ಪಣಿಯೊಂದನ್ನು ನೀಡಿರುವ ರಾಜನ್‌ ಅವರು, ಸರ್ಕಾರ ಮುಂದಿನ ಬಿಕ್ಕಟ್ಟಿನ ಮೂಲದ ಬಗ್ಗೆ ಹೆಚ್ಚು ಗಮನಹರಿಸಬೇಕೇ ಹೊರತು, ಆಗಿ ಹೋಗಿದ್ದರ ಮೇಲಷ್ಟೇ ಅಲ್ಲ ಎಂದು ಸಲಹೆ ಮಾಡಿದ್ದಾರೆ.

ಸಾಲ ವಿತರಣೆ ಗುರಿ ನಿಗದಿ ಅಥವಾ ಸಾಲ ಮನ್ನಾ ಘೋಷಣೆಯಿಂದ ಸರ್ಕಾರಗಳು ದೂರ ಉಳಿಯಬೇಕು. ಸಾಲ ವಿತರಣೆ ಗುರಿಯಿಂದಾಗಿ ಸಾಲ ನೀಡುವಾಗ ಎಚ್ಚರಿಕೆಯನ್ನು ಕಡೆಗಣಿಸಲಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಎನ್‌ಪಿಎ ಹೆಚ್ಚಾಗಲು ವಾತಾವರಣ ನಿರ್ಮಿಸಿದಂತಾಗುತ್ತದೆ. ಮುದ್ರಾ ಹಾಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಜನಪ್ರಿಯವಾಗಿವೆ. ಸಂಭಾವ್ಯ ಅಪಾಯ ತಪ್ಪಿಸಲು ಅವುಗಳ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಬೇಕಾಗಿದೆ ಎಂದು ತಿಳಿ ಹೇಳಿದ್ದಾರೆ.

ಸ್ವಸಹಾಯ ಹಾಗೂ ಸಣ್ಣ ಉದ್ದಿಮೆ ಸ್ಥಾಪನೆಗೆ ಉತ್ತೇಜನ ನೀಡುವ ಮುದ್ರಾ ಯೋಜನೆಯಡಿ ಸಾಲ ವಿತರಣೆ ಗುರಿ ತಲುಪದ ಬ್ಯಾಂಕ್‌ ವ್ಯವಸ್ಥಾಪಕರಿಗೆ ವೇತನ ಹೆಚ್ಚಳ ತಡೆ ಹಿಡಿಯುವುದಾಗಿ ಕೆಲ ತಿಂಗಳ ಹಿಂದೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್‌ ಅಹೀರ್‌ ಹೇಳಿದ್ದಾರೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜನ್‌ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಅಲ್ಲದೆ ಬ್ಯಾಂಕ್‌ಗಳಲ್ಲಿ ಹೈಪ್ರೊಫೈಲ್‌ ವಂಚನೆ ಪ್ರಕರಣಗಳ ಸಂಘಟಿಕ ಕ್ರಮಕ್ಕೆ ಕೋರಿ ತಾವು ಗವರ್ನರ್‌ ಆಗಿದ್ದ ವೇಳೆ ಪ್ರಧಾನಿ ಕಚೇರಿಗೆ ಪಟ್ಟಿರವಾನಿಸಿದ್ದ ಬಗ್ಗೆಯೂ ರಾಜನ್‌ ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ಗಳ ಒಟ್ಟಾರೆ ಅನುತ್ಪಾದಕ ಆಸ್ತಿಗೆ ಹೋಲಿಸಿದರೆ ತಾವು ಸಲ್ಲಿಸಿದ್ದ ಪಟ್ಟಿಯಲ್ಲಿನ ಪ್ರಕರಣಗಳ ಮೊತ್ತ ಭಾರೀ ಗಹನವಾದುದಲ್ಲವಾದರೂ, ಆರಂಭಿಕ ಹಂತದಲ್ಲೇ ಇಂಥ ಪ್ರಕರಣ ಬಗ್ಗೆ ಗಮನ ಸೆಳೆಯಲು ಯತ್ನ ಮಾಡಲಾಗಿತ್ತು ಎಂದು ಹೇಳಿದ್ದರೆ.