ಚೀನಾ ಆಟಿಕೆಗಳಷ್ಟೇ ಅಲ್ಲ ಚೀನಾ ನಿರ್ಮಿತ ಅಗ್ಗದ ದರ ಸೊಳ್ಳೆ ಬ್ಯಾಟ್‌ಗಳು ಆರೋಗ್ಯಕ್ಕೆ ಅತ್ಯಂತ ಹಾನಿಕಾರಿ ಎಂದು ಸಂಶೋಧನೆಯೊಂದು ತಿಳಿಸಿದೆ.

ಬೆಂಗಳೂರು(ಆ.20): ಚೀನಾ ಆಟಿಕೆಗಳಷ್ಟೇ ಅಲ್ಲ ಚೀನಾ ನಿರ್ಮಿತ ಅಗ್ಗದ ದರ ಸೊಳ್ಳೆ ಬ್ಯಾಟ್‌ಗಳು ಆರೋಗ್ಯಕ್ಕೆ ಅತ್ಯಂತ ಹಾನಿಕಾರಿ ಎಂದು ಸಂಶೋಧನೆಯೊಂದು ತಿಳಿಸಿದೆ.

ಚೀನಾ ನಿರ್ಮಿತ ಅಗ್ಗದ ಸೊಳ್ಳೆ ಬ್ಯಾಟು ಗಳಲ್ಲಿರುವ ಮಿತಿ ಮೀರಿದ ಸೀಸದ ಅಂಶವು ಪರಿಸರ ಹಾಗೂ ಚಿಕ್ಕಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈಜ್ಞಾನಿಕ ಅಧ್ಯಯನದಿಂದ ತಿಳಿದುಬಂದಿದೆ. ಹೈದರಾಬಾದ್‌ನ ಸೆಂಟರ್ ಫಾರ್ ಮಟೀರಿಯಲ್ಸ್ ಫಾರ್ ಇಲೆಕ್ಟ್ರಾನಿಕ್ಸ್ ಟೆಕ್ನಾಲಜಿ (ಸಿ-ಎಂಇಟಿ) ಸಂಸ್ಥೆಯ ‘ಅಪಾಯಕಾರಿ ಅಂಶಗಳ ಪ್ರಯೋಗಾಲಯ'ದ ವಿಜ್ಞಾನಿಗಳು ಈ ಕುರಿತು ನಡೆಸಿದ ಅಧ್ಯಯನದಲ್ಲಿ, ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್‌ಗಳಲ್ಲಿ ಮಿತಿ ಮೀರಿದ ಸೀಸದ ಅಂಶ ಇರುವುದು ದೃಢಪಟ್ಟಿದೆ. ಈ ಸೀಸದ ಅಂಶ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವರದಿಗಳು ತಿಳಿಸಿವೆ.

ಒಂದು ಅಂಕಿ-ಅಂಶದ ಪ್ರಕಾರ ಫೆಬ್ರವರಿಯಿಂದ ನವೆಂಬರ್ 2016ರವರೆಗೆ ಚೀನಾದಿಂದ 2 ಲಕ್ಷ ಸೊಳ್ಳೆ ಬ್ಯಾಟ್‌ಗಳನ್ನು ಭಾರತ ಆಮದು ಮಾಡಿಕೊಂಡಿದೆ.

ಯುರೋಪ್ ಒಕ್ಕೂಟದ ತಜ್ಞರು ನಿಗದಿಪಡಿಸಿರುವ ಮಾನದಂಡಗಳ ಅನುಸಾರ, ಸೊಳ್ಳೆ ಬ್ಯಾಟುಗಳಲ್ಲಿನ ಸೀಸದ ಅಂಶವು ಗರಿಷ್ಠ 1000 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ಇರಬೇಕು. ಆದರೆ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್‌ಗಳಲ್ಲಿ ಇದರ ಅಂಶ 3000 ಪಿಪಿಎಂನಿಂದ 82 ಸಾವಿರ ಪಿಪಿಎಂವರೆಗೂ ಇದೆ.

ವಿಶ್ವ ಆರೋಗ್ಯ ಸಂಸ್ಥೆಯ 2013ರ ವರದಿ ಪ್ರಕಾರ ಸೀಸದ ಅಂಶದಿಂದ ವಿಶ್ವದಲ್ಲಿ 1.43 ಲಕ್ಷ ಜನ ಪ್ರತಿ ವರ್ಷ ಸಾಯುತ್ತಾರೆ. 6 ಲಕ್ಷ ಮಕ್ಕಳು ಇದರಿಂದ ಬುದ್ಧಿವೈಕಲ್ಯಕ್ಕೆ ತುತ್ತಾಗುತ್ತವೆ.

ಅಪಾಯಗಳು

1. ಮಿತಿಮೀರಿದ ಸೀಸದ ಅಂಶವಿರುವ ಈ ಬ್ಯಾಟನ್ನು ಮಕ್ಕಳು ಬಾಯಲ್ಲಿಟ್ಟುಕೊಂಡರೆ ಅಥವಾ ಇದರಲ್ಲಿನ ತಂತಿಯನ್ನು ಮುಟ್ಟಿ ಅದನ್ನು ಮಕ್ಕಳು ಬಾಯಲ್ಲಿಟ್ಟುಕೊಂಡರೆ ಸೀಸದ ಅಂಶ ದೇಹದೊಳಗೆ ಸೇರಿ ಬೌದ್ಧಿಕ ಮಟ್ಟ ಕುಂಠಿತಗೊಳ್ಳಬಹುದು.

2. ಕೆಟ್ಟು ಹೋಗಿರುವ ಬ್ಯಾಟುಗಳನ್ನು ಎಲ್ಲೆಂದರಲ್ಲಿ ಬಿಸಾಕಿದರೆ ಇ-ತ್ಯಾಜ್ಯದ ಸಮಸ್ಯೆ ತಲೆದೋರಬಹುದು. ಹೀಗಾಗಿ ಇವನ್ನು ಇ-ತ್ಯಾಜ್ಯ ಘಟಕಗಳಿಗೆ ನೀಡುವುದು ಉತ್ತಮ.

3. ಇನ್ನು ಕೆಟ್ಟ ಸೊಳ್ಳೆ ಬ್ಯಾಟುಗಳನ್ನು ಕಸ ಎಂದು ಭಾವಿಸಿ ಎಲ್ಲೆಂದರಲ್ಲಿ, ಖಾಲಿ ಜಾಗೆಗಳಲ್ಲಿ ಬಿಸಾಕಿದರೆ ಅದರಲ್ಲಿನ ಸೀಸದ ವಿಷದ ಅಂಶವು ಮಣ್ಣು ಮತ್ತು ಮಳೆ ಮೂಲಕ ಅಂತರ್ಜಲ ಸೇರಿ ಅಂಜರ್ತಲ ಕಲುಷಿತವಾಗಬಹುದು.