ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ಹೂಡಿದ್ದ ಆರೋಪದಲ್ಲಿ ಬಂಧಿತರಾದವರು ರಾಜ್ಯದ ‘ಬುದ್ಧಿಜೀವಿ’ಗಳಷ್ಟೇ ಅಲ್ಲ, ಅನ್ಯರಾಜ್ಯಗಳ ಬುದ್ಧಿಜೀವಿಗಳ ಹತ್ಯೆಗೂ ಸಂಚು ರೂಪಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ದೇಶದ ವಿವಿಧೆಡೆಯ ಎಡಪಂಥೀಯ ಚಿಂತಕರನ್ನು ನಾಮಾವಶೇಷ ಮಾಡುವ ಸಂಚು ಜಾಗೃತವಾಗಿದ್ದು, ಅದರ ಅಂಗವಾಗಿಯೇ ಗೌರಿ ಹತ್ಯೆ ನಡೆದಿತ್ತು ಎಂಬ ವಾದವನ್ನು ದೃಢಪಡಿಸುವಂತಹ ಪುರಾವೆಗಳು ಗೌರಿ ಹತ್ಯೆ ಕೊಲೆ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ಲಭಿಸಿವೆ.
ಬೆಂಗಳೂರು (ಜೂ. 03): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೈದು ಚಿಂತಕ ಪ್ರೊ. ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ಹೂಡಿದ್ದ ಆರೋಪದಲ್ಲಿ ಬಂಧಿತರಾದವರು ರಾಜ್ಯದ ‘ಬುದ್ಧಿಜೀವಿ’ಗಳಷ್ಟೇ ಅಲ್ಲ, ಅನ್ಯರಾಜ್ಯಗಳ ಬುದ್ಧಿಜೀವಿಗಳ ಹತ್ಯೆಗೂ ಸಂಚು ರೂಪಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ದೇಶದ ವಿವಿಧೆಡೆಯ ಎಡಪಂಥೀಯ ಚಿಂತಕರನ್ನು ನಾಮಾವಶೇಷ ಮಾಡುವ ಸಂಚು ಜಾಗೃತವಾಗಿದ್ದು, ಅದರ ಅಂಗವಾಗಿಯೇ ಗೌರಿ ಹತ್ಯೆ ನಡೆದಿತ್ತು ಎಂಬ ವಾದವನ್ನು ದೃಢಪಡಿಸುವಂತಹ ಪುರಾವೆಗಳು ಗೌರಿ ಹತ್ಯೆ ಕೊಲೆ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ಲಭಿಸಿವೆ.
ಗೌರಿ ಹತ್ಯೆ ಪ್ರಕರಣದಲ್ಲಿ ಸಿಲುಕಿ ಬಿದ್ದಿರುವ ಮಹಾರಾಷ್ಟ್ರದ ಚಿಂಚಿವಾಡ ಜಿಲ್ಲೆಯ ಅಮೋಲ್ ಕಾಳೆ ಅಲಿಯಾಸ್ ಭಾಯಿಸಾಬ್ ಬಳಿ ದೊರಕಿರುವ ಡೈರಿಯಲ್ಲಿ ಕರ್ನಾಟಕದ ಏಳು ಮಂದಿ ಚಿಂತಕರು ಮಾತ್ರವಲ್ಲ, ದೇಶದ 12 ರಾಜ್ಯಗಳಿಗೆ ಸೇರಿದ ಸುಮಾರು 30 ಹೆಚ್ಚು ಬುದ್ಧಿಜೀವಿಗಳ ಹೆಸರು ಪತ್ತೆಯಾಗಿದೆ. ಅರ್ಥಾತ್ ಹಂತಕರ ಹಿಟ್‌ಲಿಸ್ಟ್‌ನಲ್ಲಿ ದೇಶದ 30ಕ್ಕೂ ಹೆಚ್ಚು ಎಡಪಂಥೀಯ ಚಿಂತಕರು ಇದ್ದಾರೆ.
ವಿಶೇಷವೆಂದರೆ, ಪತ್ತೆಯಾಗಿರುವ ಈ 30ಕ್ಕೂ ಹೆಚ್ಚು ಬುದ್ಧಿಜೀವಿಗಳು ಹಿಂದಿ, ಮರಾಠಿ, ಹಾಗೂ ಇಂಗ್ಲಿಷ್ ಎಡಪಂಥೀಯ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ ಸಾಹಿತಿಗಳು. ಈ ಮಾಹಿತಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಸದರಿ ಬುದ್ಧಿಜೀವಿಗಳ ಸ್ವಂತ ರಾಜ್ಯದ ಪೊಲೀಸರಿಗೂ ನೀಡಿದ್ದು, ಇದರ ಪರಿಣಾಮ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ ರಾಜ್ಯಗಳ ಪೊಲೀಸರು ಮಾಹಿತಿಗಾಗಿ ಬೆಂಗಳೂರಿಗೆ ಆಗಮಿಸಲು ಸಜ್ಜಾಗಿದ್ದಾರೆ. ವಿವಿಧ ರಾಜ್ಯಗಳ ತನಿಖಾ ತಂಡಗಳು ಬುಧವಾರದ ನಂತರ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭದ್ರತೆ ಮತ್ತು ಮುಂಜಾಗ್ರತಾ ಕ್ರಮವಾಗಿ ಹಂತಕರ ಹಿಟ್‌ಲಿಸ್ಟ್‌ನಲ್ಲಿರುವ ಸಾಹಿತಿಗಳ ಬಗ್ಗೆ ಆಯಾ ರಾಜ್ಯಗಳಿಗೆ ಮಾಹಿತಿ ರವಾನಿಸಲಾಗಿದೆ. ಅಂತಹವರ ಭದ್ರತೆಗೆ ಅಲ್ಲಿನ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಆದರೆ, ಭದ್ರತೆ ಮತ್ತು ತನಿಖೆಯ ದೃಷ್ಟಿಯಿಂದ ಹಂತಕರ ಹಿಟ್‌ಲಿಸ್ಟ್‌ನಲ್ಲಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ವ್ಯಕ್ತಿಗಳ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಹಿನ್ನೆಯಲ್ಲಿ ನೆರೆ ರಾಜ್ಯದ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಇನ್ನಿತರ ರಾಜ್ಯಗಳ ಪೊಲೀಸರು ರಾಜ್ಯದ ಎಸ್‌ಐಟಿ ತಂಡವನ್ನು ಸಂಪರ್ಕಿಸಲು ಮುಂದಾಗಿದ್ದಾರೆ. ಅದರಲ್ಲೂ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡಗಳೂ ಮಾಹಿತಿ ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದು, ಶೀಘ್ರವೇ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ ಎಸ್‌ಐಟಿ ತಂಡದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದಿಯಲ್ಲಿ ಬರೆದಿದ್ಯಾರು?:
ಈ ನಡುವೆ, ಕರ್ನಾಟಕದ ಏಳು ಮಂದಿಯ ಹೆಸರನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. ಇತ್ತೀಚೆಗೆ ಬಂಧಿತನಾಗಿದ್ದ ಮನೋಹರ್ ಈ ಹೆಸರುಗಳನ್ನು ಬರೆದಿದ್ದ ಎಂದು ಹೇಳಲಾಗಿತ್ತು. ಆದರೆ ಮನೋಹರ್‌ಗೆ ಕನ್ನಡ ಬಿಟ್ಟು ಇತರ ಭಾಷೆ ಬರುವುದಿಲ್ಲ. ಹೀಗಾಗಿ ಹಿಂದಿ ಭಾಷೆಯಲ್ಲಿ ಚಿಂತಕರ ಹೆಸರನ್ನು ಡೈರಿಯಲ್ಲಿ ಬರೆದಿದ್ದು ಯಾರು? ಈ ಬರಹ ಯಾರದ್ದು ಎಂಬ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಡೈರಿಯಲ್ಲಿ ಅಡಕವಾಗಿರುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆರು ಗಂಟೆ ಕಾಳೆ ಮನೆ ಶೋಧ:
ಆರೋಪಿ ಕಾಳೆ ಬಂಧನದ ಬಳಿಕ ಎಸ್‌ಐಟಿ ತಂಡ ಮಹಾರಾಷ್ಟ್ರದ ಚಿಂಚವಾಡದ ಮನೆ ಮೇಲೂ ದಾಳಿ ನಡೆಸಿದ್ದರು. ಸ್ಥಳೀಯರ ಪೊಲೀಸರ ನೆರವಿನಿಂದ ಸತತ ಆರು ಗಂಟೆಗಳ ಕಾಲ ಕಾಳೆ ಮನೆಯನ್ನೆಲ್ಲಾ ಎಸ್‌ಐಟಿ ತಂಡ ಜಾಲಾಡಿತ್ತು. ಮನೆಯಲ್ಲಿ ಕಾಳೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಾಗಲಿಲ್ಲ. ತನ್ನ ಕೃತ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಮನೆಯಲ್ಲಿ ಇಟ್ಟಿರಲಿಲ್ಲ. ತಾನು ನಿತ್ಯ ತೆಗೆದುಕೊಂಡು ಹೋಗುವ ಬ್ಯಾಗ್‌ನಲ್ಲಿ ಡೈರಿ ಇತ್ತು. ಅದನ್ನು ಜಪ್ತಿ ಮಾಡಲಾಯಿತು.
ಕಾಳೆ ಮನೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಆತನ ಪತ್ನಿ ಜಾಗೃತಿ ಹಾಗೂ ಮೂರು ವರ್ಷದ ಪುತ್ರ ಇದ್ದ. ದಾಳಿ ವೇಳೆ ಕಾಳೆಯ ಪತ್ನಿ ಜಾಗೃತಿ ಅವರ ಮುಖದಲ್ಲಿ ಯಾವುದೇ ಆತಂಕ ಕಂಡು ಬರಲಿಲ್ಲ. ಮನೆ ಶೋಧಿಸಲು ಸಂಪೂರ್ಣವಾಗಿ ಸಹಕರಿಸಿದರು ಎಂದು ಎಸ್‌ಐಟಿ ಉನ್ನತ ಮೂಲಗಳು ತಿಳಿಸಿವೆ.
-ಎನ್. ಲಕ್ಷ್ಮಣ್
