ಜಕಾರ್ತಾ: ಭಾರತದಲ್ಲಿ ಇವಿಎಂಗಳಿಗೆ ಗುಡ್‌ಬೈ ಹೇಳಿ ಮತ್ತೆ ಹಿಂದಿನ ಮತಪತ್ರ ವ್ಯವಸ್ಥೆ ಜಾರಿಗೆ ವಿಪಕ್ಷಗಳ ಒತ್ತಾಯ ಕೇಳಿಬರುತ್ತಿರುವ ನಡುವೆಯೇ, ನೆರೆಯ ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಮತಪತ್ರ ಎಣಿಸುವ ವೇಳೆ ಒತ್ತಡಕ್ಕೆ ಸಿಕ್ಕಿ 270 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ಅಲ್ಲದೆ ತುರ್ತಾಗಿ ಫಲಿತಾಂಶ ನೀಡಬೇಕಾದ ಒತ್ತಡದಲ್ಲಿ ಸಿಬ್ಬಂದಿ ಅವಧಿ ಮೀರಿ ಕೆಲಸ ನಿರ್ವಹಿಸುವ ಪರಿಣಾಮ ಸುಮಾರು 2000 ಕ್ಕೂ ಹೆಚ್ಚು ಸಿಬ್ಬಂದಿ ವಿವಿಧ ರೀತಿಯ ಕಾಯಿಲೆಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಹಣ ಉಳಿಸುವ ನಿಟ್ಟಿನಲ್ಲಿ ಇಂಡೋನೇಷ್ಯಾ ಸರ್ಕಾರ ಮಾಡಿದ ಪ್ರಯೋಗ ಇದೀಗ ಭಾರೀ ಟೀಕೆಗೆ ಗುರಿಯಾ ಗಿದೆ. ಇನ್ನೂ ಹಲವು ದಿನಗಳ ಕಾಲ ಮತ ಎಣಿಕೆ ಕಾರ‌್ಯ ಮುಂದುವರೆಯಬೇಕಿರುವ ಹಿನ್ನೆಲೆಯಲ್ಲಿ, ಇನ್ನಷ್ಟು ಆಘಾತಕಾರಿ ಸುದ್ದಿ ಹೊರಬೀಳುವ ಆತಂಕವೂ ವ್ಯಕ್ತವಾಗಿದೆ. ಹರಸಾಹಸ: 18000  ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಮತದಾನ ಮುಗಿದ ಬಳಿಕ ಮತಪತ್ರ ಗಳನ್ನು ಮುಖ್ಯ ಕೇಂದ್ರಗಳಿಗೆ ಸಾಗಿಸುವುದೇ ದೊಡ್ಡ ಸಾಹಸವಾಗಿತ್ತು. ಅದಾದ ಬಳಿ ಸಾವಿರಾರು ಸಿಬ್ಬಂದಿಗಳು ತುರ್ತಾಗಿ ಫಲಿತಾಂಶ ನೀಡಬೇಕಾದ ಒತ್ತಡಕ್ಕೆ ಬಿದ್ದು, ಏ.18 ರಿಂದ ಅವಧಿ ಮೀರಿ ಮತಚೀಟಿಗಳ ಎಣಿಕೆ ಆರಂಭಿಸಿದ್ದರು. ಈ ಒತ್ತಡಕ್ಕೆ ಸಿಕ್ಕಿ ಕಳೆದ 10  ದಿನದಲ್ಲಿ   ದೇಶದ ವಿವಿಧ ಭಾಗಗಳಲ್ಲಿ  270 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 2000 ಕ್ಕೂ ಹೆಚ್ಚು ಸಿಬ್ಬಂದಿ 

ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗಿದ್ದಾ ಪರಿಹಾರ: ಚುನಾವಣೆ ಕರ್ತವ್ಯದ ವೇಳೆ ಸಾವನ್ನಪ್ಪಿದ ಸಿಬ್ಬಂದಿ ಕುಟುಂಬಕ್ಕೆ 2500 ಅಮೆರಿಕನ್ ಡಾಲರ್(1 ಲಕ್ಷ 75 ಸಾವಿರ ರು.) ಪರಿಹಾರ ನೀಡಲು ಚುನಾವಣೆ ಆಯೋಗ ನಿರ್ಧರಿಸಿದೆ.

22 ಕ್ಕೆ ಫಲಿತಾಂಶ: ಏತನ್ಮಧ್ಯೆ, ಬ್ಯಾಲೆಟ್‌ಪೇಪರ್‌ನಲ್ಲಿ ದಾಖಲಾಗಿರುವ ಮತಗಳನ್ನು ಎಣಿಸಿ, ಇಂಡೋನೇಷಿಯಾದ ಚುನಾವಣೆ ಆಯೋಗ ಮೇ 22ರಂದು ಫಲಿತಾಂಶ ಪ್ರಕಟಿಸಲಿದೆ. ಆದರೆ, ಅದಕ್ಕಿಂತ ಮುಂಚಿತವಾಗಿಯೇ ಅಧ್ಯಕ್ಷ ಜೋಕೋ ವಿಡೋಡೋ ಹಾಗೂ ಪ್ರತಿಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಪ್ರಭಾವೋ ಸುಬಿಯಾಂಟೋ ಅವರು ತಾವೇ ಜಯ ಗಳಿಸಿದ್ದಾಗಿ ಘೋಷಿಸಿಕೊಳ್ಳುತ್ತಿದ್ದಾರೆ.