Asianet Suvarna News Asianet Suvarna News

20ಕ್ಕೂ ಹೆಚ್ಚು ಶಾಸಕರಿಂದ ರಾಜೀನಾಮೆ? ಬಿಜೆಪಿಯಿಂದ ಸರ್ಕಾರ ರಚನೆ

ಕರ್ನಾಟಕ ಮೈತ್ರಿ ಸರ್ಕಾರದ 20ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಬಿಜೆಪಿ ಸರ್ಕಾರ ರಚಿಸುವ ಸುಳಿವನ್ನು ಹಿರಿಯ ನಾಯಕರೋರ್ವರು ಮಾಡಿದ್ದಾರೆ. 

More Than 20 MLAs to Quit in Congress JDS Says BS Yeddyurappa
Author
Bengaluru, First Published Jul 2, 2019, 7:18 AM IST

ಬೆಂಗಳೂರು [ಜು.2]:  ಮೈತ್ರಿ ಸರ್ಕಾರದಲ್ಲಿ ಮಿತ್ರ ಪಕ್ಷಗಳ ನಡುವೆ ಸಮನ್ವಯ ಕೊರತೆಯಿಂದ ಸರ್ಕಾರ ಪತನವಾದರೆ ಪ್ರತಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಳ್ಳಲು ರಾಜಕೀಯ ಸನ್ಯಾಸಿಗಳಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ತೀವ್ರ ಹತಾಶೆಗೊಂಡಿದ್ದಾರೆ. ಎರಡು ಪಕ್ಷಗಳ 20ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಆದರೆ, ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನವಾದರೆ ಪ್ರತಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಪರ್ಯಾಯ ಸರ್ಕಾರ ರಚನೆಯ ಸುಳಿವನ್ನು ನೀಡಿದರು.

ಮಿತ್ರ ಪಕ್ಷಗಳ ಶಾಸಕರು ರಾಜೀನಾಮೆ ನೀಡಿದರೆ ನೋಡೋಣ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಮುಂದೇನು ಆಗಲಿದೆ ಎಂಬುದನ್ನು ಕಾದು ನೋಡುತ್ತೇವೆ. ಚುನಾವಣೆಗೆ ಹೋಗುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿನ ಮೈತ್ರಿ ಸರ್ಕಾರ ನಿದ್ರಾವಸ್ಥೆಯಲ್ಲಿದ್ದು, ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿ ಸರ್ಕಾರವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ಶಾಸಕ ಆನಂದ್‌ ಸಿಂಗ್‌ ರಾಜೀನಾಮೆಗೂ, ನಮಗೂ ಸಂಬಂಧ ಇಲ್ಲ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗಮನಿಸುತ್ತಿದ್ದೇವೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಳೆಗಾಲದ ಅಧಿವೇಶನದಲ್ಲಿ ಸರ್ಕಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ. ಅದರ ಬದಲು ರಾಜ್ಯದಲ್ಲಿ ಬರ ಇದೆ. ಬರ ಸಮಸ್ಯೆ ಪರಿಹಾರಕ್ಕೆ ಚರ್ಚೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಸದನದಲ್ಲಿ ಚರ್ಚೆಗೆ ಮುಂದಾಗುತ್ತೇವೆ ಎಂದರು.

Follow Us:
Download App:
  • android
  • ios