ನೆಚ್ಚಿನ ನಟನನ್ನು ಕೊನೇ ಬಾರಿಗೆ ಕಣ್ತುಂಬಿಕೊಳ್ಳಬೇಕೆಂದು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಅಂಬಿಗೆ ಅಂತಿಮ ನಮನ ಸಲ್ಲಿಸಿದರು. ಒಟ್ಟು 18 ತಾಸುಗಳಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. 

ಮಂಡ್ಯ :  ಮೈಸೂರು, ರಾಮನಗರ, ಹಾಸನ ಹೀಗೆ ಸುತ್ತಲ ಜಿಲ್ಲೆಗಳಿಂದ ಜನಸಾಗರ ಮಂಡ್ಯದೆಡೆಗೆ ಹರಿದು ಬರುತ್ತಲೇ ಇತ್ತು. ತಾವು ಆರಾಧಿಸಿದ, ಪ್ರೀತಿಸಿದ ನೆಚ್ಚಿನ ನಟನನ್ನು ಕೊನೇ ಬಾರಿಗೆ ಕಣ್ತುಂಬಿಕೊಳ್ಳಬೇಕೆಂದು ಸರದಿ ಸಾಲಲ್ಲಿ ನಿಂತು ದರ್ಶನ ಪಡೆಯುತ್ತಲೇ ಇತ್ತು. ಭಾನುವಾರ ಸಂಜೆ ಕತ್ತಲು ಕವಿಯುವ ಮುನ್ನ ಆರಂಭವಾದ ಸಾಲು ಬೆಳೆಯುತ್ತಲೇ ಹೋಯ್ತು. ಕತ್ತಲು ಕರಗಿದರೂ ಅಭಿಮಾನಿಗಳ ಸಂಖ್ಯೆ ಮಾತ್ರ ಕರಗಲಿಲ್ಲ. ಬೆಳಕಾದರೂ ಜನರ ಸಾಲು ಕೊನೆಯಾಗಲಿಲ್ಲ!

ಮಂಡ್ಯದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಟ ಅಂಬರೀಷ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಕಂಡು ಬಂದ ದೃಶ್ಯ ಇದು. ಸಾಗರೋಪಾದಿಯಲ್ಲಿ ಹರಿದು ಬಂದ ಸುಮಾರು 2 ಲಕ್ಷ ಜನ ನೆಚ್ಚಿನ ನಟ ಅಂಬರೀಷ್‌ ಅವರ ಅಂತಿಮ ದರ್ಶನ ಪಡೆದು ಕಣ್ತುಂಬಿಕೊಂಡರು. ಬರೋಬ್ಬರಿ 18 ಗಂಟೆಗಳಷ್ಟುಸುದೀರ್ಘ ಅವಧಿಯ ಈ ಅಂತಿಮ ದರ್ಶನದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರೂ ಅಭಿಮಾನಿಗಳನ್ನು ನಿಯಂತ್ರಿಸಲು ಅಕ್ಷರಶಃ ಹರಸಾಹಸಪಟ್ಟರು.

ಬೆಂಗಳೂರಿನಲ್ಲಿ ನಿಧನರಾದ ಅಂಬರೀಷ್‌ ಅವರ ಪಾರ್ಥಿವ ಶರೀರವನ್ನು ತವರು ನೆಲದ ಅಭಿಮಾನಿಗಳ ಒತ್ತಾಯದ ಮೇರೆಗೆ ಸೇನಾ ಹೆಲಿಕಾಪ್ಟರ್‌ ಮೂಲಕ ಮಂಡ್ಯದ ಸರ್‌ ಎಂ. ವಿಶ್ವೇಶ್ವರಯ್ಯಕ್ರೀಡಾಂಗಣಕ್ಕೆ ಭಾನುವಾರ ಸಂಜೆ 4.55ಕ್ಕೆ ತರಲಾಯಿತು. ಅಲ್ಲಿಂದ ಆರಂಭವಾದ ಮಂಡ್ಯದ ಗಂಡು ಅಂಬರೀಷ್‌ ಪಾರ್ಥಿವ ಶರೀರದ ಅಂತಿಮ ದರ್ಶನ ರಾತ್ರಿ ಕಳೆದು ಬೆಳಗ್ಗೆವರೆಗೂ ಮುಂದುವರಿದಿತ್ತು. ಅಂತಿಮ ನಮನ ಸಲ್ಲಿಸಲು ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸಿದರು.

ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದ ಜನಸ್ತೋಮ, ಜಿಲ್ಲೆಯ ಜನ ಹಾಗೂ ಜನಪ್ರತಿನಿಧಿಗಳ ಪ್ರೀತಿಯ ಒತ್ತಾಯಕ್ಕೆ ಮಣಿದ ಅಂಬಿ ಕುಟುಂಬ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೋಮವಾರ ಬೆಳಗಿನ ಜಾವ 6 ಗಂಟೆವರೆಗಿದ್ದ ಅಂತಿಮ ದರ್ಶನದ ಅವಕಾಶವವನ್ನು ಬೆಳಗ್ಗೆ 10ರವರೆಗೂ ವಿಸ್ತರಿಸಿದರು. ಈ ಸುದ್ದಿ ತಿಳಿಯುತ್ತಲೇ ಅಂಬಿಯ ಅಂತಿಮ ದರ್ಶನ ಪಡೆಯಲು ಮತ್ತಷ್ಟುಮಂದಿ ಕ್ರೀಡಾಂಗಣದತ್ತ ಧಾವಿಸಿ ಬಂದರು. ಜಿಲ್ಲೆಯ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಬೆಂಗಳೂರು, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ಮಡಿಕೇರಿ ಸೇರಿದಂತೆ ನಾನಾ ಭಾಗಗಳಿಂದ ಅಭಿಮಾನಿಗಳ ಮಹಾಪೂರ ಹರಿದು ಬಂತು.

ಚಳಿಯನ್ನೂ ಲೆಕ್ಕಿಸದೇ ರಾತ್ರಿ, ಮುಂಜಾನೆಯೆನ್ನದೆ ತಮ್ಮ ನೆಚ್ಚಿನ ನಟ, ನಾಯಕನ ಅಂತಿಮ ದರ್ಶನ ಪಡೆದು ಅಭಿಮಾನಿಗಳು ಭಾವನಾತ್ಮಕ ವಿದಾಯ ಹೇಳಿದರು. ಒಂದು ಕಡೆ ಸಾಗರೋಪಾದಿಯಲ್ಲಿ ಜನಸಾಗರ ಹರಿದುಬರುತ್ತಿದ್ದರೆ, ಜನಸಂದಣಿ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುತ್ತಿದ್ದರು.

ಅಭಿಮಾನಿಗಳ ಭಾವೋದ್ವೇಗ: ರೆಬೆಲ್‌ ಸ್ಟಾರ್‌ ಅಂಬರೀಷ್‌ ಅಂತಿಮ ದರ್ಶನದ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಕ್ರೀಡಾಂಗಣ ಅಕ್ಷರಶಃ ಅಭಿಮಾನಿಗಳ ಭಾವೋದ್ವೇಗ ಪ್ರದರ್ಶನದ ವೇದಿಕೆಯಂತೆ ಆಯಿತು. ನೆಚ್ಚಿನ ನಟನನ್ನು ಕಳೆದುಕೊಂಡ ಅಭಿಮಾನಿಗಳು ದುಃಖಿತರಾಗಿ ಕಣ್ಣೀರಿಡುತ್ತಿದ್ದರು. ನಿರೀಕ್ಷೆಗೂ ಮೀರಿ ಜನ ಹರಿದುಬರುತ್ತಿದ್ದ ಹಿನ್ನೆಲೆಯಲ್ಲಿ ಬ್ಯಾರಿಕೇಡ್‌ ಕಿತ್ತು ಬೀಳದಂತೆ ಪೊಲೀಸರು ಹಿಡಿದು ನಿಂತಿದ್ದರು. ಆದರೆ, ಏಕಾಏಕಿ ಜನ ನುಗ್ಗಿದ ಪರಿಣಾಮ ಅನೇಕ ಬಾರಿ ಬ್ಯಾರಿಕೇಡ್‌ಗಳು ಮುರಿದುಬಿದ್ದವು.

ಕೆಲವರು ಬ್ಯಾರಿಕೇಟ್‌ ಹಾರಿ ನುಗ್ಗಲು ಪ್ರಯತ್ನಿಸಿದರೆ ಮತ್ತೆ ಕೆಲವರು ನೋಡಲು ಬಿಡದ ಪೊಲೀಸರಿಗೆ ಧಿಕ್ಕಾರ ಕೂಗಿದರು. ಇದೆಲ್ಲವನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ತಡರಾತ್ರಿ ಅತಿಥಿಗಳ ಆಗಮನಕ್ಕೆ ಮೀಸಲಾಗಿಟ್ಟಿದ್ದ ಪ್ರವೇಶ ದ್ವಾರದಿಂದಲೂ ಅಭಿಮಾನಿಗಳ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.

ಭಾನುವಾರ ಸಂಜೆ ಆರಂಭವಾದ ಅಂಬರೀಷ್‌ ಪಾರ್ಥಿವ ಶರೀರದ ಅಂತಿಮ ದರ್ಶನ ರಾತ್ರಿ ಕಳೆದು ಬೆಳಗ್ಗೆ 10.45ರವರೆಗೂ ಮುಂದುವರಿದಿತ್ತು. ಬರೋಬ್ಬರಿ 18 ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ವರದಿ : ಅಫ್ರೋಜ್ ಖಾನ್