ಬೆಂಗಳೂರು [ಜು.20] :  ನಗರ ಪ್ರದೇಶದಲ್ಲೇ ಅತಿ ಹೆಚ್ಚು ಡೆಂಘೀ ಮತ್ತು ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆ ಆಗುತ್ತಿರು ವುದರಿಂದ ನಿಯಂತ್ರಣ ಕ್ರಮ ತೀವ್ರಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ (ಜೂನ್ ಅಂತ್ಯಕ್ಕೆ) ರಾಜ್ಯದಲ್ಲಿ 1,461 ಡೆಂಘೀ ಪ್ರಕರಣ ಪತ್ತೆಯಾಗಿವೆ. ಅದರಲ್ಲಿ ಶೇ. 39ರಷ್ಟು ಪ್ರಕರಣಗಳು ನಗರ ಪ್ರದೇಶದಲ್ಲಿ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಹೀಗಾಗಿ, ರೋಗ ನಿಯಂತ್ರಕ್ರಮ ತೀವ್ರಗೊಳ್ಳುವಂತೆ ತಿಳಿಸಿದೆ. ಡೆಂಘೀ ಮತ್ತು ಚಿಕೂನ್ ಗುನ್ಯಾ ರೋಗಕ್ಕೆ ನಿಗದಿತ ಚಿಕಿತ್ಸೆ ಇರುವುದಿಲ್ಲ. ಹೀಗಾಗಿ, ರೋಗ ಹರಡುವ ಸೊಳ್ಳೆಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. 

ಇದಕ್ಕೆ ನಗರಾಭಿವೃದ್ಧಿ  ಇಲಾಖೆಯ ಸಹಕಾರ ಮುಖ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರಿಗೆ ಪತ್ರ ಬರೆದಿದ್ದಾರೆ. ಕುಡಿಯುವ ನೀರಿನ ಸರಬರಾಜು ಮತ್ತು ನಿರ್ವಹಣೆ, ನಿರುಪಯುಕ್ತ ಘನತ್ಯಾಜ್ಯ ಶೀಘ್ರ ವಿಲೇವಾರಿ, ಸಾರ್ವಜನಿಕ ಸ್ಥಳದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಸೇರಿದಂತೆ ಡೆಂಘೀ- ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಕೋರಿದೆ.

ಸಾಂಕ್ರಮಿಕ ರೋಗ ಮಾಹಿತಿ: ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಸಾಂಕ್ರಾಮಿಕ ರೋಗಗಳ ಮಾಹಿತಿ ಸಂಗ್ರಹಿಸಲು ಬಿಬಿಎಂಪಿ, ಸಜ್ಜನ್ ರಾವ್ ವೃತ್ತದ ಪೊಬ್ಬತಿ ಹೆರಿಗೆ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಪ್ರತ್ಯೇಕ ‘ಸಾರ್ವಜನಿಕ ಸಾಂಕ್ರಮಿಕ ರೋಗಗಳ ಮಾಹಿತಿ ಕೇಂದ್ರ’ದಲ್ಲಿ (ಪಿಎಚ್‌ಐಇಸಿ) ನಗರದ ಎಲ್ಲ ಆಸ್ಪತ್ರೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

ನಗರದಲ್ಲಿರುವ 1600 ಖಾಸಗಿ ಆಸ್ಪತ್ರೆಗಳ ಪೈಕಿ ಈಗಾಗಲೇ 800 ಆಸ್ಪತ್ರೆಗಳು ಪಿಎಚ್‌ಐಇಸಿ ಘಟಕದಲ್ಲಿ ನೊಂದಣಿ ಮಾಡಿವೆ. ಅದರಲ್ಲಿ ಕೇವಲ 400 ರಿಂದ 500 ಆಸ್ಪತ್ರೆಗಳು ಮಾತ್ರ ಮಾಹಿತಿ ಸಲ್ಲಿಕೆ ಮಾಡುತ್ತಿವೆ. ನಗರದ ಎಲ್ಲ ಆಸ್ಪತ್ರೆಗಳು ಪಿಎಚ್ ಐಇಸಿ ನೋಂದಣೆ ಮಾಡಿಕೊಂಡು ಕಡ್ಡಾಯವಾಗಿ ಮಾಹಿತಿ ಸಲ್ಲಿಕೆ ಮಾಡಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಸೂಚನೆ ನೀಡಿದ್ದಾರೆ.

ವಾರಕ್ಕೊಂದು ವರದಿ: ಆನ್‌ಲೈನ್ ಅಥವಾ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಿ ಸಲ್ಲಿಕೆ ಮಾಡಬೇಕು. ಮಾಹಿತಿ ಇಲ್ಲದ ಕಾರಣ ನಗರದಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಘೀ ಮತ್ತು ಚಿಕೂನ್ ಗುನ್ಯಾರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಪಾಲಿಕೆಗೆ ಕಷ್ಟವಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.