ಬೆಂಗಳೂರು(ಆ.07): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ.

35ಎ ಕಲಂ, 370ನೇ ವಿಧಿ ರದ್ದತಿಗೆ ಜಮ್ಮು ಮತ್ತು ಕಾಶ್ಮೀರ ಅತ್ಯಂತ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸುವ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಜನತೆ ತುಂಬು ಹೃದಯದಿಂದ ಸ್ವಾಗತಿಸಿದೆ.

ಅದರಂತೆ ವಿಶೇಷ ಸ್ಥಾನಮಾನ ರದ್ದತಿ ಕುರಿತು ಕಾಶ್ಮೀರ ಜನತೆ ಅಭಿಪ್ರಾಯವೇನು? ಕೇಂದ್ರ ಸರ್ಕಾರದ ನಿರ್ಣಯದಿಂದ ಅವರಲ್ಲಿ ಮೂಡಿರುವ ನಿರೀಕ್ಷೆಗಳೇನು? ಇನ್ನು ಹತ್ತು ಹಲವು ವಿಷಯಗಳ ಕುರಿತು ನಿಮ್ಮ ಏಶಿಯಾನೆಟ್ ನ್ಯೂಸ್ ಸಂಸ್ಥೆ ಕಣಿವೆ ರಾಜ್ಯದ ಸಮೀಕ್ಷೆ ನಡೆಸಿದ್ದು, ಇದರ ಸಂಪೂರ್ಣ ವರದಿಯನ್ನು ಓದುಗರ ಮುಂದಿಡುತ್ತಿದೆ.

1. ಕಣಿವೆಯನ್ನು ಕಾಡುತ್ತಿರುವ ಸಮಸ್ಯೆಗಳು:
ಕಣಿವೆಯನ್ನು ಕಾಡುತ್ತಿರುವ ಸಮಸ್ಯೆ ಕುರಿತು ಕೇಳಲಾದ ಪ್ರಶ್ನೆಗೆ ಭಯೋತ್ಪಾದನೆ ನಮ್ಮ ದೈನಂದಿನ ಸಮಸ್ಯೆಯಾಗಿದೆ ಅಂತಾರೆ ಕಣಿವೆಯ ಜನ. ಭಯೋತ್ಪಾದನೆಯಿಂದ ಸಾಮಾಜಿಕ ಸಮಸ್ಯೆಗಳು ಉಲ್ಬಣಗೊಂಡಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

2. ಉದ್ಯೋಗಾವಕಾಶ ಹೆಚ್ಚಳಕ್ಕೆ ಮೋದಿ ಸರ್ಕಾರ ಕೈಗೊಂಡ ಕ್ರಮ:

ಭಯೋತ್ಪಾದನೆಗೆ ನಿರುದ್ಯೋಗ ಸಮಸ್ಯೆ ಕೂಡ ಕಾರಣವಾಗಿದ್ದು, ಉದ್ಯೋಗಾವಕಾಶ ಸೃಷ್ಟಿಗೆ ಮೋದಿ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಶೇ.40ರಷ್ಟು ಜನರು ಕಣಿವೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಮೋದಿ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

3. ಭಯೋತ್ಪಾದನೆ ತಡೆಗಟ್ಟಲು ಮೋದಿ ಸರ್ಕಾರ ಕೈಗೊಂಡ ಕ್ರಮ:

ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಣಿವೆಯಲ್ಲಿ ಭಯೋತ್ಪಾದನೆ ಪಿಡುಗು ಕಡಿಮೆಯಾಗುತ್ತಿದೆ ಎಂದು ಶೇ.40ಕ್ಕೂ ಹೆಚ್ಚು ಜನ ಅಭಿಪ್ರಾಯಪಟ್ಟಿದ್ದಾರೆ. ಭಯೋತ್ಪಾದನೆಗೆ ಇತಿಶ್ರೀ ಹಾಡಲು ಮೋದಿ ಸರ್ಕಾರ ದೃಢ ನಿರ್ಧಾರ ಕೈಗೊಂಡಿದ್ದು, ಇದರಿಂದ ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ನಾಂದಿ ಹಾಡಲಾಗಿದೆ ಎನ್ನುತ್ತಾರೆ ಸ್ಥಳೀಯರು.

4. ಜಮ್ಮು ಮತ್ತು ಲಡಾಖ್ ಭಾಗದಲ್ಲಿ ಮೋದಿ ಸರ್ಕಾರದ ಕುರಿತ ಅಭಿಪ್ರಾಯ:

ಜಮ್ಮು ಮತ್ತು ಲಡಾಖ್ ಭಾಗದಲ್ಲಿ ಮೋದಿ ಸರ್ಕಾರದ ಪರ ಅಲೆ ಇದ್ದು, ಮುಸ್ಲಿಂ ಬಾಹುಳ್ಯ ಕಾಶ್ಮೀರದಲ್ಲಿ ಮೋದಿ ಸರ್ಕಾರದ ಕುರಿತು ಸಕಾರಾತ್ಮಕ ನಿಲುವು ಕಂಡು ಬರುವುದಿಲ್ಲ. 

5. ಕಣಿವೆಯಲ್ಲಿ ಯಾವ ರಾಜಕೀಯ ಪಕ್ಷ ಜನಪ್ರಿಯತೆ ಪಡೆದಿದೆ?:


ನಿರೀಕ್ಷೆಯಂತೆ ಲಡಾಖ್ ಮತ್ತು ಜಮ್ಮು ಭಾಗದಲ್ಲಿ ಬಿಜೆಪಿ ಅತ್ಯಂತ ಜನಪ್ರಿಯತೆ ಪಡೆದ ಪಕ್ಷವಾಗಿದ್ದು, ಕಾಶ್ಮೀರದಲ್ಲಿ ಫಾರೂಖ್ ಅಬ್ದುಲ್ಲಾ ಅವರ ನ್ಯಾಶನಲ್ ಕಾನ್ಫರೆನ್ಸ್, ಮೆಹಬೂಬಾ ಮುಳ್ತಿ ನೇತೃತ್ವದ ಪಿಡಿಪಿ ಹಾಗೂ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಇದೆ.

6. ಕಾಂಗ್ರೆಸ್ ಅಥವಾ ಬಿಜೆಪಿ ನಿಮ್ಮ ಆಯ್ಕೆ?:

ಈ ಪ್ರಶ್ನೆಗೆ ಕಣಿವೆಯ ಜನತೆ ನೀಡಿರುವ ಉತ್ತರ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಅತ್ಯಂತ ಜನಪ್ರಿಯ ಪಕ್ಷವಾಗಿರುವುದು ಹೌದಾದರೂ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜನತೆ ಬಿಜೆಪಿಯನ್ನು ಹೆಚ್ಚು ಆಯ್ಕೆ ಮಾಡಿರುವುದು ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

7. ಜಮ್ಮು ಮತ್ತು ಕಾಶ್ಮೀರವನ್ನು ಯಾರು ಆಳಬೇಕು?:
ಪ್ರಸ್ತುತ ಕಣಿವೆಯನ್ನು ಫಾರೂಖ್ ಅಬ್ದುಲ್ಲಾ ಕೈಗೆ ನೀಡಲು ಜನತೆ ಬಯಸಿದ್ದಾರೆ. ನಂತರದ ಆಯ್ಕೆ ಓಮರ್ ಅಬ್ದುಲ್ಲಾ ಅವರಾಗಿದ್ದು, ಮೆಹಬೂಬಾ ಮುಫ್ತಿ ಮೂರನೇ ಸ್ಥಾನದಲ್ಲಿದ್ದಾರೆ. ಅದರಂತೆ ಪ್ರಧಾನಿ ಮೋದಿ ಕಣಿವೆಯ ಜನತೆಯ ನಾಲ್ಕನೇ ಆಯ್ಕೆಯಾಗಿದ್ದು, ರಾಹುಲ್ ಗಾಂಧಿ ಕೊನೆಯ ಆಯ್ಕೆಯಾಗಿದ್ದಾರೆ.