ರಾಜ್ಯದಲ್ಲಿ ಮುಂಗಾರು ಶುರು

Monsoon begins in State
Highlights

ನಿರೀಕ್ಷೆಗೂ ಮೊದಲೇ ಬುಧವಾರ ಕರಾವಳಿಯ ಎಲ್ಲೆಡೆ ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳಿಗೆ ಆಗಮಿಸಿದ್ದ ಮುಂಗಾರು ಮಾರುತಗಳು ಗುರುವಾರ ರಾಜ್ಯಾದ್ಯಂತ ವಿಸ್ತರಿಸಿದ್ದು, ಅಲ್ಲಲ್ಲಿ ಮಳೆ ಸುರಿಯಲಾರಂಭಿಸಿದೆ.
 

ಬೆಂಗಳೂರು (ಜೂ. 01): ನಿರೀಕ್ಷೆಗೂ ಮೊದಲೇ ಬುಧವಾರ ಕರಾವಳಿಯ ಎಲ್ಲೆಡೆ ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳಿಗೆ ಆಗಮಿಸಿದ್ದ ಮುಂಗಾರು ಮಾರುತಗಳು ಗುರುವಾರ ರಾಜ್ಯಾದ್ಯಂತ ವಿಸ್ತರಿಸಿದ್ದು, ಅಲ್ಲಲ್ಲಿ ಮಳೆ ಸುರಿಯಲಾರಂಭಿಸಿದೆ.

ಬುಧವಾರ ರಾಜ್ಯಕ್ಕೆ ಮುಂಗಾರು ಆಗಮಿಸಿರುವುದಾಗಿ ಹವಾಮಾನ ಇಲಾಖೆ ಅಧಿಕೃತವಾಗಿ ಘೋಷಿಸಿತ್ತು. ಗುರುವಾರ ದಕ್ಷಿಣ ಒಳನಾಡಿನ ಇತರೆ ಭಾಗಗಳು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೂ ಮುಂಗಾರು ವ್ಯಾಪಿಸಿದ್ದು, ಬಹಳಷ್ಟುಜಿಲ್ಲೆಗಳಲ್ಲಿ ವಿವಿಧೆಡೆ ಹಗುರ ಹಾಗೂ ಸಾಧಾರಣ ಮಳೆಯ ಸಿಂಚನವಾಗಿದೆ. ಇದರೊಂದಿಗೆ ಪೂರ್ವ ಮುಂಗಾರು ರಾಜ್ಯದಲ್ಲಿ ಮುಕ್ತಾಯಗೊಂಡಿದ್ದು, ಮುಂಗಾರು ಆರಂಭಗೊಂಡಿದೆ.

ಗುರುವಾರ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ವಿವಿಧೆಡೆ, ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ರಾಮನಗರ, ಬಳ್ಳಾರಿ, ಕೋಲಾರ, ಕೊಡಗು, ಹಾಸನ ಜಿಲ್ಲೆಗಳ ವಿವಿಧೆಡೆ ಮಳೆ ಬಿದ್ದಿದೆ. ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ, ಕಲಬುರಗಿ, ರಾಯಚೂರು, ಬೀದರ್‌ ಮತ್ತಿತರ ಜಿಲ್ಲೆಗಳ ಕೆಲವೆಡೆ ಮಳೆ ಬಿದ್ದಿದೆ.

ಈ ಬಾರಿ ಪೂರ್ವ ಮುಂಗಾರಿನಲ್ಲೇ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ, ಉತ್ತರ ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಗಿರುವುದರಿಂದ ರೈತರು ತಮ್ಮ ಹೊಲವನ್ನು ಹಸನು ಮಾಡಿಕೊಂಡಿದ್ದು, ಬಿತ್ತನೆಗಾಗಿ ಮುಂಗಾರಿನ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯಾದ್ಯಂತ ಮುಂಗಾರು ವ್ಯಾಪಿಸಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನಗಳ ಕಾಲ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಉತ್ತರ ಒಳನಾಡಿನ ಕೆಲವೆಡೆಯೂ ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

loader