ಬೆಂಗಳೂರು :  ‘ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ’ ಸಮೂಹದ ಅಧ್ಯಕ್ಷ ಡಾ.ರಂಜನ್ ಪೈ ದಂಪತಿಗೆ ನಂಬಿಕೆ ದ್ರೋಹ ಬಗೆದು 62 ಕೋಟಿ ವಂಚಿಸಿದ ಆರೋಪದ ಮೇರೆಗೆ ಆ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಆತನ ಪತ್ನಿ ಸೇರಿದಂತೆ ನಾಲ್ವರನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಚಿಕ್ಕಲಸಂದ್ರದ ನಿವಾಸಿ ಸಂದೀಪ್ ಗುರು ರಾಜ್, ಆತನ ಪತ್ನಿ ಪಿ.ಎನ್.ಚಾರುಸ್ಮಿತಾ, ಮುಂಬೈನ ಅಮ್ರಿತಾ ಚೆಂಗಪ್ಪ ಹಾಗೂ ಅಮ್ರಿತಾಳ ತಾಯಿ ಮೀರಾ ಚೆಂಗಪ್ಪ ಬಂಧಿತರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸಂದೀಪ್ ಸ್ನೇಹಿತ ಕತಾರ್ ಏರ್ ವೆಸ್ ಪೈಲೆಟ್ ವಿಶಾಲ್ ಸೋಮಣ್ಣ ಪತ್ತೆಗೆ ತನಿಖೆ ಮುಂದುವರೆದಿದ್ದು, ಲುಕ್ ಔಟ್ ನೋಟಿಸ್ ನೀಡಲಾಗಿದೆ. ಈ ವಂಚನೆ ಹಣದಲ್ಲಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಖರೀದಿಸಿದ್ದ ನಿವೇಶನ, ಪ್ಲ್ಯಾಟ್‌ಗಳ ದಾಖಲೆಗಳು, ಎರಡು ಕಾರು ಹಾಗೂ 1.81 ಕೋಟಿ ನಗದು ಸೇರಿದಂತೆ 4 ಕೋಟಿ ಮೌಲ್ಯದ  ಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚಿಗೆ ತಮ್ಮ ಸಂಸ್ಥೆ ಅಧ್ಯಕ್ಷರ ಖಾತೆ ಯಿಂದ ಸಂದೀಪ್, ತನ್ನ ಗೆಳೆಯ ವಿಶಾಲ್ ಸೋಮಣ್ಣನ ಖಾತೆಗೆ ಮೇಲಿಂದ ಮೇಲೆ 2 ಬಾರಿ 3.5 ಕೋಟಿ ಹಣ ವರ್ಗಾಯಿಸಿದ್ದ. ಆಗ ಅನುಮಾನಗೊಂಡ ಬ್ಯಾಂಕ್ ಅಧಿಕಾರಿ ಗಳು, ರಂಜನ್ ಪೈ ಅವರನ್ನು ಸಂಪರ್ಕಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ರಂಜನ್ ಸೂಚನೆ ಮೇರೆಗೆ ಮಣಿಪಾಲ್ ಶಿಕ್ಷಣ ಸಂಸ್ಥೆಯ ಅಧಿಕಾರಿ ನೀಡಿದ ದೂರಿನ ಮೇರೆಗೆ ಸಂದೀಪ್ ಹಾಗೂ ಆತನ ತಂಡದ ಸದಸ್ಯರನ್ನು ಬಂಧಿಸಲಾಯಿತು ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ಹೇಳಿದ್ದಾರೆ.

ಪೈ ದಂಪತಿ ಖಾತೆಗೂ ಕನ್ನ: 12 ವರ್ಷಗಳ ಹಿಂದೆ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗೆ ಚಾರ್ಟೆಂಡ್ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದ ಸಂದೀಪ್, ಪ್ರಸುತ್ತ ಬೆಂಗಳೂ ರಿನ ವಿಠ್ಠಲ್ ಮಲ್ಯ ರಸ್ತೆಯ ಜೆಡಬ್ಲ್ಯು ಮ್ಯಾರಿಯಟ್‌ನಲ್ಲಿರುವ ಆ ಸಂಸ್ಥೆಯ ಪ್ರಧಾನ ಕಚೇರಿ ಯಲ್ಲಿ ಉಪ ಪ್ರಧಾನ ವ್ಯವಸ್ಥಾಕನಾಗಿದ್ದ. 

ಸಂಸ್ಥೆಯ ಹಣಕಾಸು ವಿಭಾಗದಲ್ಲಿದ್ದ ಸಂದೀಪ್, ಅವರ ಖಾಸಗಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುವಷ್ಟರ ಮಟ್ಟಿಗೆ ಪೈ ದಂಪತಿ ವಿಶ್ವಾಸ ಗಳಿಸಿದ್ದ. ಈ ವೇಳೆ ಹಣದಾಸೆಗೆ ಮರಳಾದ ಸಂದೀಪ್, ಉಂಡ ಮನೆಗೆ ದ್ರೋಹ ಬಗೆಯಲು ನಿರ್ಧರಿಸಿದ್ದ. ಈ ವಂಚನೆಗೆ ಅದೇ ಸಂಸ್ಥೆಯಲ್ಲಿ ಹಣಕಾಸು ವಿಭಾಗದ ಕೆಲಸ ಮಾಡುತ್ತಿದ್ದ ಅಮ್ರಿತಾ ಚೆಂಗಪ್ಪ ಸಾಥ್ ಸಿಕ್ಕಿತು. 

ಅದರಂತೆ ಕಳೆದ ಐದಾರು ವರ್ಷಗಳಿಂದ ಕಂಪನಿಯ ಗೊತ್ತಾಗದಂತೆ ಈ ಇಬ್ಬರು, ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಹಣ ವರ್ಗಾಯಿಸಿಕೊಂಡು ದೋಚಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದರಂತೆ ಮಣಿಪಾಲ್ ಸಂಸ್ಥೆ ಅಧ್ಯಕ್ಷ ರಂಜನ್ ಪೈ ದಂಪತಿ ಹಾಗೂ ಆ ಸಂಸ್ಥೆಯ ವಿವಿಧ ಕಂಪನಿಗಳ ಬ್ಯಾಂಕ್ ಖಾತೆಗಳಿಂದ ಅಕ್ರಮವಾಗಿ ಹಣವನ್ನು ಸಂದೀಪ್, ತನ್ನ ಪತ್ನಿ ಚಾರುಸ್ಮಿತಾ, ದುಬೈನಲ್ಲಿ ನೆಲೆಸಿರುವ ಸ್ನೇಹಿತ ವಿಶಾಲ್ ಸೋಮಣ್ಣ, ಅಮ್ರಿತಾ ಚೆಂಗಪ್ಪ ಮತ್ತು ಆಕೆಯ ತಾಯಿ ಮೀರಾ ಚೆಂಗಪ್ಪ ಖಾತೆಗಳಿಗೆ ವರ್ಗಾಯಿಸಿದ್ದ. ಈ ಕೃತ್ಯಕ್ಕೆ ಹಣ ಸ್ವೀಕರಿಸಿದ್ದವರ ಸಹಕಾರವಿತ್ತು. 

ಇದುವರೆಗೆ ಒಟ್ಟು 62 ಕೋಟಿ ಮೋಸವಾಗಿದೆ. ಈ ಹಣವನ್ನು ದುಬೈ ಮಾತ್ರವಲ್ಲದೆ ಮುಂಬೈ ಹಾಗೂ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಹಾಗೂ ಷೇರು ವ್ಯವಹಾರದಲ್ಲಿ ಸಂದೀಪ್ ತಂಡ ತೊಡಗಿಸಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ಹೇಳಿದ್ದಾರೆ.