ನವದೆಹಲಿ(ಆ.2): ಬ್ಲೂವೇಲ್ ಎಂಬ ಪೆಡಂಬೂತ ಈಗಾಗಲೇ ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಇನ್ನೇನು ಬ್ಲೂವೇಲ್ ಕತೆ ಮುಗೀತು ಅಂದುಕೊಳ್ಳುವಷ್ಟರಲ್ಲೇ ಕಿಕಿ ಚಾಲೆಂಜ್ ದುತ್ತೆಂದು ಎದುರು ಬಂದು ನಿಂತಿದೆ.

ಆದರೆ ಇದೆಲ್ಲಕ್ಕೂ ಹೆಚ್ಚು ಗಾಬರಿ ಹುಟ್ಟಿಸುವ ಆನ್ ಲೈನ್ ಗೇಮ್ ವೊಂದು ಇದೀಗ ಸದ್ದು ಮಾಡುತ್ತಿದೆ. ಜಗತ್ತಿನ ಕೆಲವು ದೇಶಗಳಲ್ಲಿ ಈಗಾಗಲೇ ಮುಗ್ದ  ಮಕ್ಕಳ ಜೀವ ಪಡೆದಿರುವ ಈ ಗೇಮ್ ಹೆಸರು ಮೋಮೋ.

ವಾಟ್ಸಪ್ ಗೇಮ್ ಆಗಿರುವ ಮೋಮೋ, ಅರ್ಜೆಂಟೈನಾದ ೧೨ ವರ್ಷದ ಬಾಲಕಿಯೋರ್ವಳನ್ನು  ಈಗಾಗಲೇ ಬಲಿ ಪಡೆದಿದೆ. ತಾನು ಸಾಯುವ ಬಗೆಯನ್ನು ಆ ಬಾಲಕಿ ಮೊಬೈಲ್ ನಲ್ಲಿ ಚಿತ್ರೀಕರಿಸಿ ಈ ಜಗತ್ತನ್ನು ತೊರೆದಿದ್ದಳು.

ಜಪಾನ್ ಮೂಲದ ಈ ಮೋಮೋ ಗೇಮ್ ಬ್ಲೂವೇಲ್ ಗೇಮ್ ಜೊತೆ ಲಿಂಕ್ ಹೊಂದಿದ್ದು, ತನ್ನ ಗ್ರಾಹಕರಿಗೆ ಸಾಯುವ ಟಾಸ್ಕ್ ನೀಡುತ್ತಿದೆ. ಅಗಲ ಕಣ್ಣುಗಳಿರುವ ಭಯಾನಕ  ಬಾಲಕಿಯೋರ್ವಳ ಮುಖಚರ್ಯೆ ಹೊಂದಿರುವ ಈ ಗೇಮ್ ಟಾರ್ಗೆಟ್ ಹದಿಹರೆಯದ ಮಕ್ಕಳೇ ಆಗಿದ್ದಾರೆ. ಈ ಭಯಾನಕ ಆಟ ಭಾರತಕ್ಕೂ ಕಾಲಿಡುವ ಮುನ್ನ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿರುವುದು ಇಂದಿನ ತುರ್ತು ಅಗತ್ಯ.