ಗುಡಿಸಲಿನಲ್ಲಿ ರಾಮುಲು ಗ್ರಾಮವಾಸ್ತವ್ಯ, ಶಿವಪೂಜೆ

First Published 29, Jun 2018, 11:29 AM IST
Molakalmuru MLA B Sriramulu  Stay In Village
Highlights

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಂಸದ ಬಿ. ಶ್ರೀರಾಮಲು ಅವರು ಚಳ್ಳಕೆರೆ ತಾಲೂಕಿನ ನಲಗೇತನಹಟ್ಟಿಯಲ್ಲಿ ಬುಧವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆದರು.

ಚಿತ್ರದುರ್ಗ : ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಂಸದ ಬಿ. ಶ್ರೀರಾಮಲು ಅವರು ಚಳ್ಳಕೆರೆ ತಾಲೂಕಿನ ನಲಗೇತನಹಟ್ಟಿಯಲ್ಲಿ ಬುಧವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆದರು.

ತೆಲುಗು ಭಾಷಿಕರೇ ಅಧಿಕವಾಗಿರುವ ಈ ಗ್ರಾಮದಲ್ಲಿ ತೆಲುಗು ಮಿಶ್ರಿತ ಕನ್ನಡದಲ್ಲಿಯೇ ರಾಮುಲು ಜನರೊಂದಿಗೆ ಮಾತನಾಡಿ ಸಮಸ್ಯೆ ಆಲಿಸಿದರು. ರಾಮುಲು ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಾತ್ರಿ 11 ಗಂಟೆಗೆ ಗ್ರಾಮಕ್ಕೆ ಆಗಮಿಸಿದ ಶ್ರೀರಾಮುಲುಗೆ ಅದ್ಧೂರಿ ಸ್ವಾಗತ ದೊರೆಯಿತು. ಗ್ರಾಮದ ಪರಿಶಿಷ್ಟಜಾತಿಯ ಮಂಜುಳಾ ಮತ್ತು ದುರುಗಪ್ಪ ದಂಪತಿಯ ಗುಡಿಸಲಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮಂಜುಳಾ ಹಾಗೂ ದುರುಗಪ್ಪ ದಂಪತಿ ಮಾಡಿದ್ದ ರಾಗಿರೊಟ್ಟಿಹಾಗೂ ಹಾಗಲಕಾಯಿ ಪಲ್ಯ ಸವಿದ ಶಾಸಕರು, ಗುಡಿಸಲಿನ ಮೂಲೆಯಲ್ಲಿ ಹಾಸಿದ್ದ ಚಾಪೆ ಮೇಲೆ ಮಲಗಿದರು.

ಮುಕ್ಕಾಲು ತಾಸು ಶಿವಪೂಜೆ: ಗುರುವಾರ ಮುಂಜಾನೆ 5ಕ್ಕೆ ಎದ್ದು ಗ್ರಾಮದ ಕಾಂಕ್ರಿಟ್‌ ರಸ್ತೆಯಲ್ಲಿ ಒಂದು ಸುತ್ತು ಹಾಕಿದ ರಾಮುಲು ನಂತರ ಗುಡಿಸಲಿಗೆ ತೆರೆಳಿ ಅದರ ಮುಂಭಾಗವೇ ಇಪ್ಪತ್ತು ನಿಮಿಷ ಪ್ರಾಣಾಯಾಮ ಮಾಡಿ ಪತ್ರಿಕೆಗಳ ಮೇಲೆ ಕಣ್ಣಾಯಿಸಿದರು. ಬಳಿಕ ತಡಿಕೆಗಳಿಂದ ಮಾಡಿದ ಬಚ್ಚಲು ಮನೆಯಲ್ಲಿ ಝಳಕ ಮಾಡಿ ಅಲ್ಲಿನ ಜನರ ಜೊತೆ ಸಹಜವಾಗಿಯೇ ಕಾಲ ಕಳೆದರು. ನಂತರ ಮುಕ್ಕಾಲು ತಾಸು ಜಾಗಟೆ ಹಾಗೂ ಮಂತ್ರೋದ್ಘೋಷದ ನಡುವೆ ಶಿವಪೂಜೆ ಮಾಡಿದರು. ಗುಡಿಸಿಲಿನ ಮೂಲೆಯಲ್ಲಿಯೇ ಶಿವಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು.

loader