ನವದೆಹಲಿ[ಡಿ.28]: ಮುಂದಿನ 100ದಿನಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಗೆ ರೈತರ ಸಮಸ್ಯೆಗಳನ್ನು ಕಾಂಗ್ರೆಸ್ ತನ್ನ ಪ್ರಮುಖ ಚುನಾವಣಾ ವಿಷಯವಾಗಿ ಮಾಡಿಕೊಳ್ಳುವುದು ಬಹುತೇಕ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಪ್ರತಿತಂತ್ರ ರೂಪಿಸಲು ಆರಂಭಿಸಿದ್ದಾರೆ. ಕಾಂಗ್ರೆಸ್ಸಿನ ಸಾಲ ಮನ್ನಾ ಅಸ್ತ್ರವನ್ನು ನಿಷ್ಕ್ರಿಯಗೊಳಿಸಲು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ ಸಿಂಗ್ ಚೌಹಾಣ್ ಅವರ ‘ಭಾವಾಂತರ’ (ಭಾವ್-ಬೆಲೆ, ಅಂತರ್-ವ್ಯತ್ಯಾಸ)ಯೋಜನೆ ಜಾರಿಗೆ 3 ತಾಸು ಚರ್ಚೆ ನಡೆಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ ಮಾರುಕಟ್ಟೆ ಬೆಲೆಯ ನಡುವಣ ವ್ಯತ್ಯಾಸದ ಮೊತ್ತವನ್ನು ರೈತರಿಗೆ ನೇರವಾಗಿ ವರ್ಗಾವಣೆ ಮಾಡುವುದೇ ’ಭಾವಾಂತರ’. 

ಜ.೫ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯುವಷ್ಟರಲ್ಲಿ ಮೋದಿ ಅವರು ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಇದಲ್ಲದೆ, ಬಿಜೆಪಿ ಆಳ್ವಿಕೆಯ ಜಾರ್ಖಂಡ್‌ನಲ್ಲಿರುವ ರೈತರಿಗೆ ನೇರ ಸಬ್ಸಿಡಿ ವರ್ಗಾವಣೆ ಯೋಜನೆ ಕುರಿತೂ ಸರ್ಕಾರ ಪರಿಶೀಲಿಸುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿನ ಸಾಲ ಮಿತಿಯನ್ನು ಹೆಚ್ಚಳ ಮಾಡುವ ಪ್ರಸ್ತಾವವೂ ಇದೆ ಎನ್ನಲಾಗಿದೆ. 

ಕಾಂಗ್ರೆಸ್ಸಿಗೆ ಪ್ರತಿ ಸವಾಲು: ಬಿಜೆಪಿ ಸಂಘಟನೆ ಪ್ರಬಲವಾಗಿರುವ, ಹಿಂದಿ ನಾಡಿನ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲು ರೈತರ ಸಮಸ್ಯೆಯೇ ಕಾರಣ, ಕಾಂಗ್ರೆಸ್ ಪಕ್ಷ ಸಾಲ ಮನ್ನಾ ಘೋಷಣೆ ಮಾಡಿದ್ದು ಬಿಜೆಪಿ ಹಿನ್ನಡೆಗೆ ಭಾರಿ ಕೊಡುಗೆ ನೀಡಿತು ಎಂಬ ವಿಶ್ಲೇಷಣೆಗಳಿವೆ. ಕಾಂಗ್ರೆಸ್ಸಿಗೆ ಅಧಿಕಾರ ಸಿಕ್ಕ ಖುಷಿಯಲ್ಲಿರುವ ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ದೇಶಾದ್ಯಂತ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿ ಅವರನ್ನು ನಿದ್ರೆ ಮಾಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ರಾಹುಲ್ ಸವಾಲು ಹಾಗೂ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ, ಬುಧವಾರ ರಾತ್ರಿ ತಮ್ಮ ನಿವಾಸದಲ್ಲಿ ಮೂರು ತಾಸು ಮಹತ್ವದ ಚರ್ಚೆ ನಡೆಸಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೃಷಿ ಸಚಿವ ರಾಧಾಮೋಹನ ಸಿಂಗ್ ಅವರು ಭಾಗವಹಿಸಿದ್ದ ಈ ಸಭೆಯಲ್ಲಿ ಸಾಲ ಮನ್ನಾದಿಂದಾಚೆಗೂ ಚರ್ಚೆ ನಡೆದಿದೆ. ಅದರಲ್ಲಿ ‘ಭಾವಾಂತರ’ ಪ್ರಮುಖವಾಗಿ ಚರ್ಚೆಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಜ.೫ರಂದು ತೆರೆ ಬೀಳಲಿದೆ. ಅಷ್ಟರೊಳಗೆ ಅಂದರೆ ಹೊಸ ವರ್ಷದ ಸಂದರ್ಭದಲ್ಲಿ ಮೋದಿ ಅವರು ರೈತರ ಅನುಕೂಲಕ್ಕಾಗಿ ಹೊಸ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು  ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.