Asianet Suvarna News Asianet Suvarna News

7PMಗೆ ಹೊಸ ಪಿಎಂ: ನಮೋ 2.019 ಶಕೆ ಆರಂಭ!

7PMಗೆ ಹೊಸ ಪಿಎಂ| ನಮೋ 2.019 ಶಕೆ ಆರಂಭ!| ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ 2ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ| 15ನೇ ಪ್ರಧಾನಿ: ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ ವಚನ| 10 ದೇಶಗಳು: ಮೋದಿ ಶಪಥ ಸ್ವೀಕಾರ ಸಮಾರಂಭಕ್ಕೆ ವಿದೇಶಿ ಗಣ್ಯ

Modi to take oath as PM for second term
Author
Bangalore, First Published May 30, 2019, 7:33 AM IST

ನವದೆಹಲಿ[ಮೇ.30]: ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಪುನರಾಯ್ಕೆಯಾಗಿರುವ ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಮಂತ್ರಿಯಾಗಿ ಗುರುವಾರ ರಾತ್ರಿ 7ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತನ್ಮೂಲಕ, ಸ್ಪಷ್ಟಬಹುಮತ ಹೊಂದಿದ್ದ ಪಕ್ಷದ ಪ್ರಧಾನಿಯಾಗಿ 5 ವರ್ಷ ಪೂರೈಸಿ ಮತ್ತೊಮ್ಮೆ ಸ್ಪಷ್ಟಬಹುಮತದೊಂದಿಗೆ ಪ್ರಧಾನಿಯಾದ ಮೊದಲ ಕಾಂಗ್ರೆಸ್ಸೇತರ ವ್ಯಕ್ತಿ ಎಂಬ ಇತಿಹಾಸ ನಿರ್ಮಿಸಲಿದ್ದಾರೆ.

ಸುಮಾರು 10 ದೇಶಗಳ ಪ್ರಮುಖರು ಹಾಗೂ ದೇಶದ ಗಣ್ಯಾತಿಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದ ಮುಂಭಾಗದ ಬಯಲಿನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ 68 ವರ್ಷದ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರಮಾಣ ವಚನ ಹಾಗೂ ಗೋಪ್ಯತಾ ವಿಧಿಯನ್ನು ಬೋಧಿಸಲಿದ್ದಾರೆ. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಪೀಯೂಷ್‌ ಗೋಯಲ್‌, ಸ್ಮೃತಿ ಇರಾನಿ ಮತ್ತಿತರರು ಸಂಪುಟ ದರ್ಜೆ ಸಚಿವರಾಗಿ ಶಪಥಗ್ರಹಣ ಮಾಡುವ ನಿರೀಕ್ಷೆ ಇದೆ.

ಇನ್ನು ಸಂಂಪುಟದಲ್ಲಿ ಶಿವಸೇನೆ ಮತ್ತು ಜೆಡಿಯು ತಲಾ 2, ಶಿರೋಮಣಿ ಅಕಾಲಿದಳ, ಎಐಎಡಿಎಂಕೆ, ಎಲ್‌ಜೆಪಿಗೆ ತಲಾ ಒಂದು ಸ್ಥಾನ ನೀಡಲಾಗುವುದು ಎನ್ನಲಾಗಿದೆ. ಇದರ ಜೊತೆಗೆ ಈ ಬಾರಿ ಪಕ್ಷಕ್ಕೆ ಭಾರೀ ಸ್ಥಾನ ಗೆದ್ದುಕೊಟ್ಟಯುಪಿ, ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢಕ್ಕೆ ಹೆಚ್ಚಿನ ಸ್ಥಾನ ಕಲ್ಪಿಸಲು ನಿರ್ಧರಿಸಲಾಗಿದೆ. ಇನ್ನು ರಾಜಕೀಯ ಕಾರಣಗಳಿಗಾಗಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗುವುದು ಎನ್ನಲಾಗಿದೆ.

ತಮ್ಮ ಜತೆ ಎಷ್ಟುಮಂದಿ ಹಾಗೂ ಯಾರಾರ‍ಯರು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ಮೋದಿ ಅವರಾಗಲೀ, ಅಮಿತ್‌ ಶಾ ಅವರಾಗಲೀ ಯಾರಿಗೂ ಬಹಿರಂಗಪಡಿಸಿಲ್ಲ. ಹೀಗಾಗಿ ದೇಶ ಜನರಷ್ಟೇ ಕುತೂಹಲ ಬಿಜೆಪಿಯ ಘಟಾನುಘಟಿ ನಾಯಕರಿಗೂ ಇದೆ.

2014ರಲ್ಲೂ ಮೋದಿ ಅವರು ರಾಷ್ಟ್ರಪತಿ ಭವನದ ಮುಂಭಾಗದಲ್ಲೇ 5000 ಗಣ್ಯರ ಸಮ್ಮುಖದಲ್ಲಿ ಶಪಥಗ್ರಹಣ ಮಾಡಿದ್ದರು. ಈ ಬಾರಿ 8500 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. 2014ರಲ್ಲಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನ ಒಳಗೊಂಡ ಸಾರ್ಕ್ ದೇಶಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಈ ಬಾರಿ ಬಾಂಗ್ಲಾದೇಶ, ನೇಪಾಳ, ಭೂತಾನ್‌, ಶ್ರೀಲಂಕಾ, ಥಾಯ್ಲೆಂಡ್‌, ಮ್ಯಾನ್ಮಾರ್‌ ಹಾಗೂ ಭಾರತ ಒಳಗೊಂಡ ‘ಬಿಮ್‌ಸ್ಟೆಕ್‌’ (ಬಂಗಾಳ ಕೊಲ್ಲಿ ದೇಶಗಳ ಬಹು ಕ್ಷೇತ್ರೀಯ ತಾಂತ್ರಿಕ ಹಾಗೂ ಆರ್ಥಿಕ ಸಹಕಾರ ಸಂಘಟನೆ) ಗಣ್ಯರನ್ನು ಕರೆಯಲಾಗಿದೆ.

ಭೂತಾನ್‌ ಪ್ರಧಾನಿ ಲೋಟೆ ಶೇರಿಂಗ್‌, ಥಾಯ್ಲೆಂಡ್‌ ಪ್ರಧಾನಿ ಪ್ರಯೂತ್‌ ಚಾನ್‌ ಒ ಚಾ, ಶ್ರೀಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆ, ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ, ಮ್ಯಾನ್ಮಾರ್‌ ಪ್ರಧಾನಿ ಆ್ಯಂಗ್‌ ಸಾನ್‌ ಸೂಕಿ ಮೋದಿ ಪ್ರಮಾಣ ವಚನವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇದಲ್ಲದೇ ಮಾರಿಷಸ್‌ ಹಾಗೂ ಕಿರ್ಗಿಸ್ತಾನ ನಾಯಕರೂ ಪಾಲ್ಗೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಾರ್ಯಕ್ರಮಕ್ಕೆ ಎಲ್ಲಾ ವಿಪಕ್ಷಗಳ ನಾಯಕರು, ಎಲ್ಲಾ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಬಿಜೆಪಿ ಮತ್ತು ಎನ್‌ಡಿಎ ಪಕ್ಷಗಳ ಹಿರಿಯ ನಾಯಕರು, ಕ್ರೀಡಾಪಟುಗಳು, ಉದ್ಯಮಿಗಳು, ಚಲನಚಿತ್ರನಟರಿಗೆ ಆಹ್ವಾನ ನೀಡಲಾಗಿದೆ.

ಚುನಾವಣಾ ವೇಳೆ ನಡೆದ ಭಾರೀ ವಾಕ್ಸಮರ, ವೈಯಕ್ತಿಕ ಟೀಕಾ ಪ್ರಹಾರಗಳ ಹೊರತಾಗಿಯೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಉಳಿದಂತೆ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಜಗನ್ಮೋಹನ್‌ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌, ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ವಿಪಕ್ಷ ನಾಯಕರ ಪೈಕಿ ಪ್ರಮುಖರಾಗಿದ್ದಾರೆ.

15ನೇ ಪ್ರಧಾನಿ: ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ ವಚನ

10 ದೇಶಗಳು: ಮೋದಿ ಶಪಥ ಸ್ವೀಕಾರ ಸಮಾರಂಭಕ್ಕೆ ವಿದೇಶಿ ಗಣ್ಯರು

8500 ಮಂದಿ: ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅತಿಥಿಗಳು

3 ಸಿಎಂಗಳು: ಮುಖ್ಯಮಂತ್ರಿಗಳಾದ ಎಚ್‌ಡಿಕೆ, ಜಗನ್‌, ಕೆಸಿಆರ್‌ ಭಾಗಿ

Follow Us:
Download App:
  • android
  • ios