ಇದೇ 24ರಂದು ದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಈ ವಿಚಾರ ತಿಳಿಸಿದ್ದಾರೆ ಎಂದು ‘ಕ್ಯಾಚ್ ನ್ಯೂಸ್’ ವರದಿ ಮಾಡಿದೆ. ಸುದ್ದಿಗೋಷ್ಠಿಯ ಬಳಿಕ ಅವರಿಗೆ ನೂರಾರು ಬೆದರಿಕೆ ಕರೆಗಳು ಬಂದಿವೆ ಎಂದೂ ಅವರು ಆರೋಪಿಸಿದ್ದಾರೆ.

ನವದೆಹಲಿ(ನ.30):ಪ್ರಧಾನಿ ನರೇಂದ್ರ ಮೋದಿ ಅವರು ನ.೮ರಂದು ದೇಶವನ್ನುದ್ದೇಶಿಸಿ ಮಾತನಾಡಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಅಮಾನ್ಯ ವಿಚಾರ ಘೋಷಣೆ ಮಾಡಿದ ವಿಡಿಯೋವನ್ನು ಕೆಲವು ದಿನಗಳ ಹಿಂದೆಯೇ ರೆಕಾರ್ಡ್ ಮಾಡಲಾಗಿತ್ತು. ಅದು ನೇರಪ್ರಸಾರ ಆಗಿರಲಿಲ್ಲ ಎಂಬ ಅಚ್ಚರಿಯ ವಿಷಯವೊಂದನ್ನು ದೂರದರ್ಶನದ ಪತ್ರಕರ್ತ ಸತ್ಯೇಂದ್ರ ಮುರಳಿ ಬಹಿರಂಗಪಡಿಸಿದ್ದಾರೆ.

ಇದೇ 24ರಂದು ದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಈ ವಿಚಾರ ತಿಳಿಸಿದ್ದಾರೆ ಎಂದು ‘ಕ್ಯಾಚ್ ನ್ಯೂಸ್’ ವರದಿ ಮಾಡಿದೆ. ಸುದ್ದಿಗೋಷ್ಠಿಯ ಬಳಿಕ ಅವರಿಗೆ ನೂರಾರು ಬೆದರಿಕೆ ಕರೆಗಳು ಬಂದಿವೆ ಎಂದೂ ಅವರು ಆರೋಪಿಸಿದ್ದಾರೆ.

ನೇರಪ್ರಸಾರ ಅಲ್ಲವೇ ಅಲ್ಲ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮುರಳಿ ಅವರು, ‘‘ನ.8ರಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ ಅವರ ಕಾರ್ಯಕ್ರಮದ ವಿಡಿಯೊ ಮೊದಲೇ ರೆಕಾರ್ಡ್ ಮಾಡಲಾಗಿದ್ದು, ಅದು ಲೈವ್ ಟೆಲಿಕಾಸ್ಟ್ ಅಲ್ಲ,’’ ಎಂದು ಆರೋಪಿಸಿದ್ದರು. ಇದಾದ ಬಳಿಕ ಕಚೇರಿಯ ಸಹೋದ್ಯೋಗಿಯೊಬ್ಬರು ಹಲ್ಲೆ ನಡೆಸುವುದಾಗಿ ಮುರಳಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ‘‘ನನ್ನನ್ನು ಕೊಲೆ ಮತ್ತು ಅಪಹರಣಗೈಯ್ಯುವುದಾಗಿ ಕೆಲವರು ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನನ್ನ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರ ನಡೆಯುತ್ತಿದ್ದು, ಫೇಸ್‌ಬುಕ್ ಪೇಜ್‌ನಲ್ಲಿ ಅವಹೇಳನಕಾರಿ ಸಂದೇಶಗಳು ಬರುತ್ತಿವೆ,’’ ಎಂದು ಮುರಳಿ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಭಾಷಣದ ವಿರುದ್ಧ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಮೋದಿ ಅವರ ಭಾಷಣದ ವಿಡಿಯೊ ಫುಟೇಜ್, ಆಡಿಯೊ ಮತ್ತು ಇತರೆ ದಾಖಲೆಗಳನ್ನು ಆರ್‌ಟಿಐ ಮೂಲಕ ಪಡೆಯಲು 2 ವಾರ ಬೇಕಾಯಿತು. ಹಾಗಾಗಿ, ಈ ಬಗ್ಗೆ ಬಹಿರಂಗಪಡಿಸಲು ವಿಳಂಬವಾಯಿತು ಎಂದು ಅವರು ಹೇಳಿದ್ದಾರೆ. ಮೋದಿ ಭಾಷಣದ ನಿರ್ಧಾರ ಪ್ರಧಾನಿ ಕಾರ್ಯಾಲಯ ತೆಗೆದುಕೊಂಡಿತ್ತಾದರೂ, ಈ ಕುರಿತು ಉತ್ತರಿಸದ ಪಿಎಂಒ, ನನ್ನ ಆರ್‌ಟಿಐ ಅರ್ಜಿಯನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ವಿತ್ತ ಸಚಿವಾಲಯಗಳಿಗೆ ಕಳುಹಿಸಿತ್ತು ಎಂದು ಮುರಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ, ‘‘ನೋಟುಗಳ ಅಮಾನ್ಯಗೊಳಿಸುವಂತೆ ಆರ್‌ಬಿಐ ನ.೮ರ ಸಂಜೆ ೬ ಗಂಟೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ರಾತ್ರಿ 7 ಗಂಟೆಗೆ ಸಂಪುಟದ ಒಪ್ಪಿಗೆ ಸಿಕ್ಕಿತು’’ ಎಂಬ ಸರ್ಕಾರದ ಹೇಳಿಕೆ ದೊಡ್ಡ ಬೋಗಸ್ ಎಂದಿದ್ದಾರೆ ಮುರಳಿ.

ಯಾವೆಲ್ಲ ಸಾಕ್ಷ್ಯಾಧಾರಗಳಿವೆ?

- ಮೋದಿ ಭಾಷಣ ಪ್ರಸಾರ ಆಗುವ ಹಲವು ದಿನಗಳ ಹಿಂದೆಯೇ ಭಾಷಣದ ಪ್ರತಿ ತಯಾರಾಗಿತ್ತು

- ರೆಕಾರ್ಡ್ ಮಾಡಿದ್ದ ಮೋದಿ ಭಾಷಣವನ್ನು ಪ್ರಸಾರ ಮಾಡುವ ಮುನ್ನ ಎಡಿಟ್ ಮಾಡಲಾಗಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ ಇದೆ

- ಭಾಷಣದ ವಿಡಿಯೋವನ್ನು ನೇರಪ್ರಸಾರ ಎಂಬ ಟ್ಯಾಗ್‌ಲೈನ್ ಮೂಲಕವೇ ಪ್ರಸಾರ ಮಾಡುವಂತೆ ಸರ್ಕಾರ ಸೂಚಿಸಿತ್ತು.

- ಸರ್ಕಾರದ ನಿರ್ದೇಶನವನ್ನು ದೂರದರ್ಶನ ಸೇರಿದಂತೆ ಎಲ್ಲ ಖಾಸಗಿ ವಾಹಿನಿಗಳು ಪಾಲನೆ ಮಾಡಿವೆ