ನವದೆಹಲಿ[ಫೆ.08]: ಪ್ರಧಾನಿ ನರೇಂದ್ರ ಮೋದಿ ‘ಡರ್‌ ಪುಕ್‌’ (ಪುಕ್ಕಲು) ವ್ಯಕ್ತಿ ಎಂದು ವಾಕ್‌ಪ್ರಹಾರ ನಡೆಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಷ್ಟ್ರೀಯ ಭದ್ರತೆ, ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಹಾಗೂ ಆರ್ಥಿಕತೆಯಂತಹ ವಿಚಾರಗಳಲ್ಲಿ ಪ್ರಧಾನಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

5 ವರ್ಷಗಳ ಕಾಲ ಹೋರಾಡಿ ಆ ವ್ಯಕ್ತಿಯನ್ನು ನೋಡಿದ್ದೇನೆ. ಅವರೊಬ್ಬ ಪುಕ್ಕಲು. ಯಾರಾದರೂ ಎದುರಿಗೆ ಬಂದು ನಿಂತರೆ ಓಡಿ ಹೋಗುತ್ತಾರೆ. ಮೋದಿ ಅವರ ಮುಖದಲ್ಲಿ ಭಯ ಕಾಣುತ್ತಿದೆ. ನರೇಂದ್ರ ಮೋದಿ ಅವರ ಇಮೇಜ್‌ ನಾಶವಾಗಿದೆ ಎಂದು ಪಕ್ಷದ ಅಲ್ಪಸಂಖ್ಯಾತ ಘಟಕದ ಸಮಾವೇಶದಲ್ಲಿ ಹರಿಹಾಯ್ದರು.

ಡೋಕ್ಲಾಮ್‌ಗೆ ಚೀನಾ ತನ್ನ ಸೇನೆಯನ್ನು ಕಳುಹಿಸಿದರೆ, ಪ್ರಧಾನಿ ಮೋದಿ ಅವರು ಯಾವುದೇ ಅಜೆಂಡಾ ಇಲ್ಲದೇ ಚೀನಾಕ್ಕೆ ಹೋಗಿ ಶೃಂಗಸಭೆ ನಡೆಸುತ್ತಾರೆ. ಚೀನಾದ ಮುಂದೆ ಕೈಮುಗಿದು ನಿಲ್ಲುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ನ್ಯಾಯಾಂಗದಿಂದ ಹಿಡಿದು ಚುನಾವಣಾ ಆಯೋಗದವರೆಗೆ ವಿವಿಧ ಸಂಸ್ಥೆಗಳನ್ನೇ ವಶಕ್ಕೆ ಪಡೆಯಲು ಆರ್‌ಎಸ್‌ಎಸ್‌ ಪ್ರಯತ್ನಿಸುತ್ತಿದೆ. ಇಂತಹ ಸಂಸ್ಥೆಗಳಲ್ಲಿ ಇರುವ ಆರ್‌ಎಸ್‌ಎಸ್‌ ವ್ಯಕ್ತಿಗಳನ್ನು ತೆಗೆದು ಹಾಕುವಂತೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿರುವ ನಮ್ಮ ಸರ್ಕಾರಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.