ತಮಿಳುನಾಡಿನ ಜನರ ಭಾವನೆಗಳನ್ನು ಕೇಂದ್ರ ಸರಕಾರ ಗೌರವಿಸುತ್ತದೆ. ಜಲ್ಲಿಕಟ್ಟು ಪರವಾಗಿ ಸುಗ್ರೀವಾಜ್ಞೆ ಹೊರಡಿಸಲು ತಯಾರಿ ನಡೆದಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ನವದೆಹಲಿ(ಜ. 20): ಜಲ್ಲಿಕಟ್ಟು ಪರ ತಮಿಳುನಾಡು ಜನರು ನಡೆಸುತ್ತಿರುವ ಹೋರಾಟಕ್ಕೆ ಕೇಂದ್ರ ಸರಕಾರ ಮಣಿದಿದೆ. ಸುಪ್ರೀಂಕೋರ್ಟ್ ಆದೇಶವನ್ನೂ ಮೀರಿ ಜಲ್ಲಿಕಟ್ಟು ಆಚರಿಸಲು ಪಟ್ಟುಹಿಡಿದಿರುವ ತಮಿಳುನಾಡಿಗೆ ಕೇಂದ್ರ ಅಭಯ ಹಸ್ತ ನೀಡಿದೆ. ಕೇಂದ್ರದ ಒತ್ತಾಯಕ್ಕೆ ಕಟ್ಟುಬಿದ್ದ ಸುಪ್ರೀಂಕೋರ್ಟ್, ಜಲ್ಲಿಕಟ್ಟು ನಿಷೇಧಿಸಿ ಹೊರಡಿಸಿದ್ದ ತನ್ನ ಆದೇಶವನ್ನು ಒಂದು ವಾರದ ಮಟ್ಟಿಗೆ ಮುಂದೂಡಿದೆ. ತಮಿಳುನಾಡು ಸಿಎಂ ಪನ್ನೀರ್'ಸೆಲ್ವಂ ಸತತವಾಗಿ ಪ್ರಧಾನಿ ಮತ್ತು ಕೇಂದ್ರ ಸಚಿವರನ್ನು ಭೇಟಿಯಾಗಿ ಮಾಡಿಕೊಂಡ ಬಂದ ಮಾತುಕತೆ ಮತ್ತು ಒತ್ತಾಯಗಳು ಫಲ ನೀಡಲು ಆರಂಭಿಸಿದೆ. ಇನ್ನೆರಡು ದಿನಗಳಲ್ಲಿ ಕೇಂದ್ರ ಸರಕಾರವು ಜಲ್ಲಿಕಟ್ಟು ಆಚರಣೆಯನ್ನು ಕಾನೂನುಬದ್ಧಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಪನ್ನೀರ್'ಸೆಲ್ವಂ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಜಲ್ಲಿಕಟ್ಟು ಆಚರಣೆಗೆ ಸಿದ್ಧರಾಗಿರುವಂತೆ ಮಧುರೈ, ಕೊಯಮತ್ತೂರಿನ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿರುವುದು ಗಮನಾರ್ಹ.
ತಮಿಳುನಾಡಿನ ಒಗ್ಗಟ್ಟಿಗೆ ಬೆರಗಾದ ಕೇಂದ್ರ:
ಜಲ್ಲಿಕಟ್ಟು ಆಚರಣೆ ಪರ ಇಡೀ ತಮಿಳುನಾಡು ಸಮುದಾಯ ಒಗ್ಗಟ್ಟಿನ ಪ್ರದರ್ಶನ ತೋರಿದೆ. ರಾಜಕೀಯ ಪಕ್ಷಭೇದ ಬಿಟ್ಟು ಎಲ್ಲಾ ಪಕ್ಷಗಳ ಮುಖಂಡರು ಜಲ್ಲಿಕಟ್ಟು ಪರ ನಿಂತಿದ್ದಾರೆ. ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರೆಲ್ಲರೂ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಜಲ್ಲಿಕಟ್ಟು ಆಚರಣೆಯ ವೈಶಿಷ್ಟ್ಯವನ್ನು ತಿಳಿಹೇಳಿದ್ದಾರೆ.
ತಮಿಳುನಾಡಿನ ಜನರ ಭಾವನೆಗಳನ್ನು ಕೇಂದ್ರ ಸರಕಾರ ಗೌರವಿಸುತ್ತದೆ. ಜಲ್ಲಿಕಟ್ಟು ಪರವಾಗಿ ಸುಗ್ರೀವಾಜ್ಞೆ ಹೊರಡಿಸಲು ತಯಾರಿ ನಡೆದಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ.
