ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 50 ಕೋಟಿ ಮಂದಿ ಕಾರ್ಮಿಕ-ನೌಕರ ವರ್ಗದ ಜನರನ್ನು ಗುರಿಯಾಗಿಸಿಕೊಂಡು ಮೂರು ಭರ್ಜರಿ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. 

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 50 ಕೋಟಿ ಮಂದಿ ಕಾರ್ಮಿಕ-ನೌಕರ ವರ್ಗದ ಜನರನ್ನು ಗುರಿಯಾಗಿಸಿಕೊಂಡು ಮೂರು ಭರ್ಜರಿ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಉದ್ಯೋಗಸ್ಥರೂ ಸೇರಿದಂತೆ ಶ್ರಮಿಕ ವರ್ಗದವರಿಗೆ ವೃದ್ಧಾಪ್ಯ ಪಿಂಚಣಿ, ಜೀವವಿಮೆ ಹಾಗೂ ಹೆರಿಗೆ ಸೌಲಭ್ಯದಂತಹ ಕೊಡುಗೆಗಳನ್ನು ಪ್ರಕಟಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಇದು ಅಸಂಘಟಿತ ವಲಯಕ್ಕೂ ಲಭಿಸುವ ಯೋಜನೆಯಾಗಿದೆ ಎಂದು ಹೆಸರು ಬಹಿರಂಗಪಡಿಸಲು ಉದ್ದೇಶಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ‘ಬ್ಲೂಮ್‌ಬರ್ಗ್‌’ ಸುದ್ದಿಸಂಸ್ಥೆ ವರದಿ ಮಾಡಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಪರಿಪೂರ್ಣವಾಗಿ ಜಾರಿಗೆ ಬರುವ ಅನುಮಾನವಿದೆ. ಹೀಗಾಗಿ ಲೋಕಸಭೆ ಚುನಾವಣೆಗೂ ಮುನ್ನ ಆರು ಜಿಲ್ಲೆಗಳಲ್ಲಿ ಇದನ್ನು ಸರ್ಕಾರ ಪ್ರಾಯೋಗಿಕವಾಗಿ ಜಾರಿಗೆ ತರುವ ಸಾಧ್ಯತೆ ಇದೆ.

ದೇಶದ 50 ಕೋಟಿ ಜನರಿಗೆ ಆರೋಗ್ಯ ವಿಮೆ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ ಯೋಜನೆಯನ್ನು ಫೆಬ್ರವರಿಯಲ್ಲಿ ಮಂಡನೆ ಮಾಡಿದ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅದನ್ನು ಮೋದಿಕೇರ್‌ ಎಂದೇ ಬಣ್ಣಿಸಲಾಗಿತ್ತು. ಅದಾದ ನಂತರ ಜಾರಿಯಾಗುತ್ತಿರುವ ಮತ್ತೊಂದು ಸಮೂಹ ಕಾರ್ಯಕ್ರಮ ಇದಾಗಿದೆ ಎಂದು ವರದಿ ಹೇಳಿದೆ.

ಈ ಕಾರ್ಯಕ್ರಮದಿಂದ ಮೋದಿ ಅವರಿಗೆ ರಾಜಕೀಯ ಲಾಭವಾಗುತ್ತದೆಯಾದರೂ, ಈಗಾಗಲೇ ಏಷ್ಯಾದಲ್ಲೇ ಅತ್ಯಧಿಕವಾಗಿರುವ ಭಾರತದ ವಿತ್ತೀಯ ಕೊರತೆ ಮೇಲೆ ಮತ್ತಷ್ಟುಒತ್ತಡ ಬೀಳುತ್ತದೆ ಎಂದು ವರದಿ ತಿಳಿಸಿದೆ.

15 ಕೇಂದ್ರ ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ, ಸರಳಗೊಳಿಸಿ ಒಂದು ಕಾಯ್ದೆಯನ್ನಾಗಿಸಲು ಹಾಗೂ ಅಸಂಘಟಿತ ವಲಯ ಸೇರಿದಂತೆ ಎಲ್ಲ ವಿಭಾಗದ ನೌಕರರಿಗೂ ಸೌಲಭ್ಯಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಕರಡು ಮಸೂದೆಯೊಂದನ್ನು ಸಿದ್ಧಪಡಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಂದರೆ ಜುಲೈನಲ್ಲಿ ಇದನ್ನು ಮಂಡನೆ ಮಾಡುವ ಉದ್ದೇಶವಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಅವರು ತಿಳಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

- ಕಾರ್ಮಿಕ-ನೌಕರ ವರ್ಗಕ್ಕೆ ಭಾರೀ ಅನುಕೂಲ?

1. ವೃದ್ಧಾಪ್ಯ ವೇತನ ಕಾರ್ಯಕ್ರಮ

2. ಜೀವ ವಿಮಾ ಸೌಲಭ್ಯ ಯೋಜನೆ

3. ಹಲವು ಹೆರಿಗೆ ಸಂಬಂಧಿ ಸೌಲಭ್ಯ