ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ನೆರವಾಗುವ ಸಲುವಾಗಿ ಲೋಕಸಭೆ ಚುನಾವಣೆಗೂ ಮೊದಲು ತೆಲಂಗಾಣದ ‘ರೈತ ಬಂಧು’ ಮಾದರಿ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ರೈತರ ಬ್ಯಾಂಕ್‌ ಖಾತೆಗೆ ವರ್ಷಕ್ಕೆ ಇಂತಿಷ್ಟುಎಂದು ನಗದು ವರ್ಗಾವಣೆ ಮಾಡುವ ಯೋಜನೆ ಇದಾಗಿದ್ದು, ಜಾರಿಗೆ ಬಂದರೆ ಕೃಷಿಕರಿಗೆ ಸಿಗುತ್ತಿರುವ ರಸಗೊಬ್ಬರದಂತಹ ಸಬ್ಸಿಡಿಗಳು ರದ್ದಾಗಲಿವೆ ಎಂದು ಹೇಳಲಾಗಿದೆ.

ರೈತರಿಗೆ ಹೇಗಿದ್ದರೂ ಆರ್ಥಿಕ ನೆರವು ನೀಡುವ ಸಲುವಾಗಿ ಯೋಜನೆ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ರಸಗೊಬ್ಬರ ಮತ್ತಿತರ ಸಬ್ಸಿಡಿಯನ್ನು ನಿಲ್ಲಿಸಲು ಸರ್ಕಾರ ಆಲೋಚನೆಯಲ್ಲಿ ಮಗ್ನವಾಗಿದೆ ಎಂದು ಚರ್ಚೆಯಲ್ಲಿ ಭಾಗಿಯಾಗಿರುವ ಕೆಲ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗದು ವರ್ಗಾವಣೆ ಯೋಜನೆ ವೆಚ್ಚವನ್ನು ವಾರ್ಷಿಕ 70 ಸಾವಿರ ಕೋಟಿ ರು.ಗೆ ಸೀಮಿತಗೊಳಿಸಲು ಸರ್ಕಾರ ಉದ್ದೇಶಿಸಿದೆ. ಮಾ.31ಕ್ಕೆ ಮುಕ್ತಾಯಗೊಳ್ಳುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ 70 ಸಾವಿರ ಕೋಟಿ ರು. ಅನ್ನು ಸರ್ಕಾರ ಕೃಷಿ ಸಬ್ಸಿಡಿಗಾಗಿ ಮೀಸಲಿಟ್ಟಿದೆ. ಹೀಗಾಗಿ ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.