ನವದೆಹಲಿ[ಡಿ.18]: ದೇಶದಲ್ಲಿರುವ ಉದ್ಯೋಗ ಕೊರತೆಯನ್ನು ತಗ್ಗಿಸಲು ಹಾಗೂ ನವಮತದಾರರನ್ನು ಸೆಳೆಯಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೆಗಾ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ. ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೊನೆಯ ವರ್ಷದಲ್ಲಿ ತರಬೇತಿ ಕೊಟ್ಟು, ಅವರಿಗೆ ಉದ್ಯೋಗ ದೊರಕಿಸಿಕೊಡುವಂತೆ ಮಾಡುವ ಯೋಜನೆ ಇದಾಗಿದ್ದು, 2019ರಿಂದ ಜಾರಿಗೆ ಬರಲಿದೆ.

ಮಾನವಸಂಪನ್ಮೂಲ ಅಭಿವೃದ್ಧಿ, ಕಾರ್ಮಿಕ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಗಳ ಸಹೊಯೋಗದೊಂದಿಗೆ ಈ ‘ಅಪ್ರೆಂಟಿಸ್‌ ಯೋಜನೆ’ ಜಾರಿಯಾಗುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳ ವಿಜ್ಞಾನೇತರ ಹಾಗೂ ತಾಂತ್ರಿಕೇತರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. 6ರಿಂದ 10 ತಿಂಗಳ ತರಬೇತಿ ಕಾರ್ಯಕ್ರಮ ಇದಾಗಿದ್ದು, ಆ ಅವಧಿಯಲ್ಲಿ ಸರ್ಕಾರ ಸ್ಟೈಪೆಂಡ್‌ ನೀಡಲಿದೆ.

ವಿಜ್ಞಾನ, ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗಗಳು ಸಿಗುತ್ತಿವೆ. ಆದರೆ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗದ ವೇಳೆ ಉದ್ಯೋಗ ತರಬೇತಿ ಕೊಡಲಿದ್ದು, ಕೇಂದ್ರ ಸರ್ಕಾರದ ಕಂಪನಿಗಳು, ದೊಡ್ಡ ಉದ್ಯಮಗಳನ್ನು ತೊಡಗಿಸಿಕೊಳ್ಳಲಾಗುತ್ತದೆ. ಉತ್ಕೃಷ್ಟದರ್ಜೆಯ ತರಬೇತಿಯನ್ನು ಕೊಡಿಸಿ, ಕಾಲೇಜಿನಿಂದ ಹೊರಬರುತ್ತಿದ್ದಂತೆ ಉದ್ಯೋಗಕ್ಕೆ ಸೇರುವಷ್ಟರ ಮಟ್ಟಿಗೆ ಸಜ್ಜುಗೊಳಿಸಲಾಗುತ್ತದೆ. ಈ ಯೋಜನೆ ಬಗ್ಗೆ ಕಳೆದ ವಾರವಷ್ಟೇ ಅಧಿಕಾರಿಗಳು ಸಭೆ ನಡೆಸಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾದ್ಯಮವೊಂದು ವರದಿ ಮಾಡಿದೆ.

2019-20ನೇ ಸಾಲಿನಲ್ಲಿ 10 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ಅಪ್ರೆಂಟೀಸ್‌ ಉತ್ತೇಜನಾ ಯೋಜನೆಯಡಿ ಬಳಕೆಯಾಗದ 10 ಸಾವಿರ ಕೋಟಿ ರು. ಮೂಲ ನಿಧಿ ಇದ್ದು, ಅದನ್ನು ಸ್ಟೈಪೆಂಡ್‌ಗಾಗಿ ಬಳಸಿಕೊಳ್ಳಲಾಗುತ್ತದೆ. ಪ್ರತಿ ವಿದ್ಯಾರ್ಥಿಗೂ ಮಾಸಿಕ 1500 ರು.ವರೆಗೂ ಸ್ಟೈಪೆಂಡ್‌ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.