ಸೇನೆಯ ಸರ್ಜಿಕಲ್‌ ದಾಳಿಯ ವಿಡಿಯೋ ತುಣುಕುಗಳು ಇದೇ ಮೊದಲ ಬಾರಿಗೆ ಬಹಿರಂಗವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ಇತರ ಪ್ರತಿಪಕ್ಷಗಳು ಟೀಕಾ ಪ್ರಹಾರವೇ ನಡೆಸಿವೆ.

ನವದೆಹಲಿ: 2016ರ ಉರಿ ಉಗ್ರರ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲಿನ ಭಾರತದ ಸೇನೆಯ ಸರ್ಜಿಕಲ್‌ ದಾಳಿಯ ವಿಡಿಯೋ ತುಣುಕುಗಳು ಇದೇ ಮೊದಲ ಬಾರಿಗೆ ಬಹಿರಂಗವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ಇತರ ಪ್ರತಿಪಕ್ಷಗಳು ಟೀಕಾ ಪ್ರಹಾರವೇ ನಡೆಸಿವೆ.

2016ರ ಸರ್ಜಿಕಲ್‌ ದಾಳಿಯನ್ನು ಬಿಜೆಪಿ ಮತ್ತು ಮೋದಿ ಸರ್ಕಾರ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ. ಅಲ್ಲದೆ, ದೇಶಕ್ಕಾಗಿನ ಯೋಧರ ಬಲಿದಾನ ಮತ್ತು ಅವರ ರಕ್ತವನ್ನು ಮತಗಳಿಕೆಯ ಸಾಧನವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಆದರೆ, ಇದು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಗುರುವಾರ ಮಾತನಾಡಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ, ದೇಶದ ಯೋಧರ ತ್ಯಾಗ ಮತ್ತು ಶೌರ್ಯವನ್ನು ಮೋದಿ ಸರ್ಕಾರ ತಮ್ಮ ಖಾತೆಗೆ ಸೇರಿಸಿಕೊಳ್ಳುತ್ತಿದೆ. ಮತ್ತೊಂದೆಡೆ ಪಾಕಿಸ್ತಾನ ಜತೆಗಿನ ಸಂಬಂಧದ ದೂರಾಲೋಚನೆ ಗೊತ್ತುಪಡಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ, ಎಂದು ಹೇಳಿದ್ದಾರೆ. ಬಜೆಟ್‌ನಲ್ಲಿ ಸೇನೆಗೆ ಹೆಚ್ಚು ಅನುದಾನ ಕಲ್ಪಿಸದೇ ಸೇನೆ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸಿದೆ. ಆದರೆ, 2016 ಸೆಪ್ಟೆಂಬರ್‌ 28 ಮತ್ತು 29ರ ಸರ್ಜಿಕಲ್‌ ದಾಳಿಯನ್ನು 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ನಾಚಿಕೆಯಿಲ್ಲದೆ, ತನ್ನ ರಾಜಕೀಯ ಲಾಭಕ್ಕಾಗಿ ಬಿಜೆಪಿ ಬಳಸಿಕೊಂಡಿತು. ಮೋದಿ ಸರ್ಕಾರದ ಅಸಾಮರ್ಥ್ಯ ಮತ್ತು ನಿರ್ಲಕ್ಷ್ಯತನದ ಪರಿಣಾಮ ಪಾಕಿಸ್ತಾನ 1600 ಬಾರಿ ಕದನ ವಿರಾಮ ಉಲ್ಲಂಘನೆಯ ದಾಳಿಗಳು ಮತ್ತು 76 ಉಗ್ರರ ದಾಳಿಯಲ್ಲಿ 146 ಯೋಧರು ಬಲಿದಾನವಾಗಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಜಿಕಲ್‌ ದಾಳಿಯಿಂದ ಏನಾದರೂ ಬದಲಾವಣೆ ಆಗಿದೆಯೇ: 2016ರಲ್ಲಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್‌ ದಾಳಿ ಮಾಡಿತೇ ಅಥವಾ ಇಲ್ಲ ಎಂಬುದರ ಕುರಿತು ಚರ್ಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ, ಸರ್ಜಿಕಲ್‌ ದಾಳಿಯಿಂದ ಏನಾದರೂ ಬದಲಾವಣೆ ಆಗಿದೆಯೇ ಎಂಬುದನ್ನು ಚರ್ಚಿಸುವ ಅಗತ್ಯವಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.