ಸಂಸತ್ತಿನ ಎರಡೂ ಸದನಗಳಲ್ಲಿ ಸತತ ಗೈರು ಹಾಜರಾಗುತ್ತಿರುವ ಬಿಜೆಪಿ ಸಂಸದರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇನ್ನು ಅಮಿತ್ ಶಾ ಇಲ್ಲಿರುತ್ತಾರೆ, ನಿಮ್ಮ ರಜಾ ದಿನಗಳೆಲ್ಲಾ ಮುಗಿದವು’ ಎಂದು ಪ್ರಧಾನಿ ಮೋದಿ, ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ(ಆ.11): ಸಂಸತ್ತಿನ ಎರಡೂ ಸದನಗಳಲ್ಲಿ ಸತತ ಗೈರು ಹಾಜರಾಗುತ್ತಿರುವ ಬಿಜೆಪಿ ಸಂಸದರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇನ್ನು ಅಮಿತ್ ಶಾ ಇಲ್ಲಿರುತ್ತಾರೆ, ನಿಮ್ಮ ರಜಾ ದಿನಗಳೆಲ್ಲಾ ಮುಗಿದವು’ ಎಂದು ಪ್ರಧಾನಿ ಮೋದಿ, ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ.
‘ಸಂಸತ್ತಿನಲ್ಲಿ ಹಾಜರಿರುವಂತೆ ನಿಮಗೆ ಹಲವು ಬಾರಿ ಹೇಳಿದ್ದೇವೆ. ಆದರೂ ಕೆಲವು ಸಂಸದರು ಗೈರು ಹಾಜರಾಗಿರುತ್ತಿದ್ದೀರಿ. ನಿಮ್ಮನ್ನು ನೀವು ಏನಂದುಕೊಂಡಿದ್ದೀರಿ? ನೀವೂ ಏನೂ ಅಲ್ಲ, ನಾನೂ ಏನೂ ಅಲ್ಲ. ಬಿಜೆಪಿಯೊಂದೇ ಅತ್ಯಂತ ಮುಖ್ಯವಾದುದು’ ಎಂದು ಮೋದಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಅಮಿತ್ ಶಾ ಗುಜರಾತ್'ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದು ಸಂಸತ್ತಿಗೆ ಅವರ ಮೊದಲ ಪ್ರವೇಶವಾಗಿದೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಹತ್ವದ ಮಸೂದೆಯೊಂದಕ್ಕೆ ತಿದ್ದುಪಡಿ ಸೂಚಿಸಿ ವಿಪಕ್ಷಗಳ ಸೂಚಿಸಿದ್ದ ನಿರ್ಣಯವನ್ನು ಮತಕ್ಕೆ ಹಾಕಿದಾಗ, ಹಲವು ಬಿಜೆಪಿ ಸದಸ್ಯರು ಕಲಾಪಕ್ಕೆ ಗೈರಾಗಿದ್ದರು. ಹೀಗಾಗಿ ಸರ್ಕಾರಕ್ಕೆ ಸೋಲಾಗಿತ್ತು. ಇದರಿಂದ ಪಕ್ಷ ತೀವ್ರ ಮುಜುಗರ ಅನುಭವಿಸಿತ್ತು. ಬಗ್ಗೆ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ಮತ್ತೆ ಇದು ಮರುಕಳಿಸದಂತೆ ಸಂಸದರಿಗೆ ಎಚ್ಚರಿಕೆ ನೀಡಿದ್ದರು.
