ವಾಹನ, ಫ್ರಿಜ್‌, ಜಮೀನು ಇದ್ದರೆ ಮೋದಿ ಕೇರ್‌ ಸಿಗಲ್ಲ |  ರಾಷ್ಟ್ರೀಯ ಆರೋಗ್ಯ ಸಂಸ್ಥೆಯಿಂದ ರಾಜ್ಯಗಳಿಗೆ ಸೂಚನೆ | 

ನವದೆಹಲಿ (ಅ. 11): ತಿಂಗಳಿಗೆ 10 ಸಾವಿರಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳು ಅಥವಾ ದ್ವಿಚಕ್ರವಾಹನ, ಫ್ರಿಜ್‌ ನಂತಹ ಸೌಲಭ್ಯಗಳನ್ನು ಹೊಂದಿರುವವರು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಭಾರತ ಯೋಜನೆಯ ಆರೋಗ್ಯ ವಿಮಾ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ.

ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಎಚ್‌ಎ), ರಾಜ್ಯಗಳಿಗೆ ತಿಂಗಳಿಗೆ 10 ಸಾವಿರಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳನ್ನು ಯೋಜನೆಯಿಂದ ಹೊರಗೆ ಇಡುವಂತೆ ರಾಜ್ಯಗಳಿಗೆ ಸೂಚಿಸಿದೆ. ಜೊತೆಗೆ ಸಂಸದರು, ಶಾಸಕರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಈ ಯೋಜನೆಯ ಫಲಾನುಭವಿಗಳಾಗುವುದರಿಂದ ಹೊರಗಿಡುವಂತೆ ತಿಳಿಸಿದೆ.

2011ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯನ್ನು ಆಧರಿಸಿ ಬಡತನ ರೇಖೆಯಲ್ಲಿರುವ 10.4 ಕೋಟಿ ಕುಟುಂಬಗಳನ್ನು ಯೋಜನೆಗೆ ಗುರುತಿಸಲಾಗಿದೆ. 50 ಕೋಟಿ ಭಾರತೀಯರಿಗೆ ಪ್ರತಿ ವರ್ಷ 5 ಲಕ್ಷ ರು. ವರೆಗಿನ ಆರೋಗ್ಯ ಸೇವೆ ನೀಡುವ ಗುರಿಯನ್ನು ಯೋಜನೆ ಹೊಂದಿದೆ.

2.5 ಎಕರೆಗಳಿಗಿಂತ ಹೆಚ್ಚಿನ ನೀರಾವರಿ ಭೂಮಿ ಹಾಗೂ ನೀರಾವರಿ ಸಲಕರಣೆಗಳನ್ನು ಹೊಂದಿರುವವರನ್ನು ಕೂಡ ಯೋಜನೆಯಿಂದ ಹೊರಗೆ ಇಡಲಾಗಿದೆ. ಮೀನುಗಾರಿಕಾ ಬೋಟ್‌, ದ್ವಿಚಕ್ರ, ಮೂರು ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು, ಟ್ರ್ಯಾಕ್ಟರ್‌ಗಳ, 50 ಸಾವಿರಕ್ಕಿಂತ ಹೆಚ್ಚಿನ ಸಾಲ ಸೌಲಭ್ಯಗಳಿರುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹೊಂದಿರುವ, ತೆರಿಗೆ ಪಾವತಿದಾರನ್ನು ಆಯುಷ್ಮಾನ್‌ ಭಾರತ ಯೋಜನೆಯಿಂದ ಹೊರಗಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.