ರಿಯಾಯಿತಿ ದರದಲ್ಲಿ ತಿಂಡಿ-ಊಟ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಕಾಂಕ್ಷೆ ಯೋಜನೆಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸೆಡ್ಡು ಹೊಡೆಯಲು ಮುಂದಾಗಿದ್ದು, ಇಂದಿರಾ ಕ್ಯಾಂಟಿನ್ ಆರಂಭಕ್ಕೂ ಮುನ್ನವೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೆಸರಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು(ಜು.19): ರಿಯಾಯಿತಿ ದರದಲ್ಲಿ ತಿಂಡಿ-ಊಟ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಕಾಂಕ್ಷೆ ಯೋಜನೆಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸೆಡ್ಡು ಹೊಡೆಯಲು ಮುಂದಾಗಿದ್ದು, ಇಂದಿರಾ ಕ್ಯಾಂಟಿನ್ ಆರಂಭಕ್ಕೂ ಮುನ್ನವೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೆಸರಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಆ.15ರಂದು ಇಂದಿರಾ ಗಾಂಧಿ ಕ್ಯಾಂಟೀನ್‌ಗೆ ಚಾಲನೆ ನೀಡಲು ಸರ್ಕಾರವು ತಯಾರಿ ನಡೆಸುತ್ತಿದೆ. ಆದರೆ, ಕ್ಯಾಂಟೀನ್ ನಿರ್ಮಾಣ ಕಾಮಗಾರಿಯು ಮಂದಗತಿಯಲ್ಲಿ ಸಾಗಿದ್ದು, ಹಲವು ಅಡ್ಡಿಗಳು ಎದುರಾಗುತ್ತಿವೆ. ಹೀಗಾಗಿ ನಿರೀಕ್ಷೆಯಂತೆ ನಗರದಲ್ಲಿ ಎಲ್ಲಾ ಕಡೆ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವುದು ಕಷ್ಟ. ಇದರ ಲಾಭವನ್ನು ಪಡೆಯಲು ಮುಂದಾಗಿರುವ ಶರವಣ ಅವರು ಇಂದಿರಾ ಕ್ಯಾಂಟೀನ್‌ಗೆ ಸೆಡ್ಡು ಹೊಡೆಯಲು ನಿರ್ಧರಿಸಿದ್ದಾರೆ.
ಶರವಣ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೆಸರಲ್ಲಿ ಅಪ್ಪಾಜಿ ಹೆಸರಲ್ಲಿ ಕ್ಯಾಂಟೀನ್ ಆರಂಭಿಸಲು ಸಕಲ ಸಿದ್ದತೆ ಕೈಗೊಂಡಿದ್ದಾರೆ. ಅಪ್ಪಾಜಿ ಕ್ಯಾಂಟೀನ್‌ನ ಮೊದಲ ಶಾಖೆಯು ಹನುಮಂತ ನಗರದ 50 ಅಡಿ ರಸ್ತೆಯಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಅಪ್ಪಾಜಿ ಕ್ಯಾಂಟೀನ್‌ನಲ್ಲಿ ₹5ಕ್ಕೆ ತಟ್ಟೆ ಇಡ್ಲಿ, ವಡೆ, ಖಾರಬಾತ ದೊರೆಯಲಿದೆ. ₹10ಗೆ ಪೊಂಗಲ್ ನೀಡಲು ದರ ನಿಗದಿ ಮಾಡಲಾಗಿದೆ. ಅಂತೆಯೇ ಬಸ್ಸಾರು, ಮುದ್ದೆ,
ಅನ್ನ ಸಾರು, ರೈಸ್‌ಬಾತ್‌ಗೆ ₹10 ನಿಗದಿ ಮಾಡಲಾಗಿದೆ. ಬೆಳಗ್ಗೆ 7.30ರಿಂದ 10ಗಂಟೆವರೆಗೆ ತಿಂಡಿ, ಮಧ್ಯಾಹ್ನ 12.30ರಿಂದ 2.30ರವರೆಗೆ ಊಟ ಸಿಗಲಿದೆ. ರಾತ್ರಿ ಊಟದ ಇರುವುದಿಲ್ಲ. ಮೊದಲಿಗೆ ಹನುಮಂತನಗರದಲ್ಲಿ ಆರಂಭಿಸಿ ನಂತರ ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಯಾಂಟೀನ್ ಆರಂಭಿಸಲು ಶರವಣ ಅವರು ಉದ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.
