ಬೆಂಗಳೂರು(ಸೆ. 21): ಸುಪ್ರೀಂ ಕೋರ್ಟ್ ಕಾವೇರಿ ವಿಚಾರದಲ್ಲಿ ರಾಜ್ಯವನ್ನ ಬಿಡದೇ ಕಾಡ್ತಿದೆ. ಕಾವೇರಿ ನೀರು ಹಂಚಿಕೆಗೆ ನಿರ್ವಹಣಾ ಮಂಡಳಿ ರಚಿಸುವ ಮರಣಶಾಸನ ಬರೆಯುತ್ತಿದ್ದಂತೆ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಸುಪ್ರೀಂ ಕೋರ್ಟ್'ನ ಈ ತೀರ್ಪಿನ ವಿರುದ್ಧ ಜನರು ಮತ್ತು ಜನಪ್ರತಿನಿಧಿಗಳು ಹೋರಾಟಕ್ಕೆ ಧುಮುಕಿದ್ದಾರೆ.

ಕಾವೇರಿ ಕೊಳ್ಳದ ಜನಪ್ರತಿನಿಧಿಗಳ ರಾಜೀನಾಮೆ ಪರ್ವ:
ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಕಾವೇರಿ ಕೊಳ್ಳದ ಜನಪ್ರತಿನಿಧಿಗಳ ರಾಜೀನಾಮೆ ಪರ್ವ ಶುರುವಾಗಿದೆ. ಮಂಡ್ಯ ಕ್ಷೇತ್ರದ ಜೆಡಿಎಸ್ ಸಂಸದ ಪುಟ್ಟರಾಜು, ಜಿಲ್ಲಾಧಿಕಾರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರಿ ಕಾರು, ಮತ್ತು ಕಚೇರಿ ಸೌಲಭ್ಯ ವಾಪಸ್​ ಮಾಡಿದ್ದಾರೆ..

ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಎಸ್.ಪುಟ್ಟಣ್ಣಯ್ಯ ರಾಜೀನಾಮೆ ನಿರ್ಧಾರ ಮಾಡಿದ್ದಾರೆ. ಇನ್ನು, ಜೆಡಿಎಸ್‌ನ ಬಂಡಾಯ ಶಾಸಕರಾದ ಚೆಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಜಮೀರ್​ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ, ಬಾಲಕೃಷ್ಟ ಸೇರಿ 8 ಶಾಸಕರಿಂದ ರಾಜೀನಾಮೆ​ ಹಾಗೂ ಕಾವೇರಿ ತೀರ ಭಾಗದ ವಿಧಾನ ಪರಿಷತ್ ಸದಸ್ಯರು ಕೂಡಾ ಇಂದು ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ..

ಮಂಡ್ಯದಲ್ಲಿ ಹೆಚ್ಚಾಯ್ತು ಹೋರಾಟದ ಕಿಚ್ಚು:
ಮಂಡ್ಯದಲ್ಲಂತೂ ಪ್ರತಿಭಟನೆ ಜೋರಾಗಿದ್ದು ನಮ್ಮ ಗೋಳು, ಕಷ್ಟ, ನೋವು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್​'ಗೆ ಕೇಳೋದಿಲ್ಲವಾ ಅಂತ ಫುಲ್ ಗರಂ ಆಗಿದ್ದಾರೆ. ರಸ್ತೆಯಲ್ಲೇ ಮಲಗಿ ಆತ್ಮಹತ್ಯೆ ಯತ್ನ ಕೂಡ ನಡೆಯಿತು. ಕೈಯಲ್ಲಿ ನೇಣು ಹಗ್ಗ ಹಿಡ್ದು, ತಮಿಳ್ನಾಡು ಸಿಎಂ ಜಯಲಲಿತಾ ಫೋಟೋಗೆ ಚಪ್ಪಲಿಯಿಂದ ಹೊಡೆದು ತಮ್ಮ ಸಿಟ್ಟನ್ನ ಪ್ರತಿಭಟನಕಾರರು ಕಾರಿಕೊಂಡ್ರು. ರಾತ್ರಿ ಕನ್ನಡಪರ ಸಂಘಟನೆಯಿಂದ ಪಂಜಿನ ಮೆರವಣೆಗೆ ಕೂಡಾ ನಡೆಯಿತು.

ಇದೇ ವೇಳೆ, ಮಂಡ್ಯ ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಒಟ್ನಲ್ಲಿ ಪದೇ ಪದೇ ಸರ್ವೋಚ್ಛ ನ್ಯಾಯಾಲಯ ಕಾವೇರಿ ವಿಚಾರದಲ್ಲಿ ರಾಜ್ಯದ ಜನತೆ ಮೇಲೆ ಸವಾರಿ ಮಾಡ್ತಿದೆ..

- ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್​