ಬೆಂಗಳೂರು [ಆ.02] :  ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸುವ ವೇಳೆ ಗೈರು ಹಾಜರಾಗಿ ಬಿಎಸ್‌ಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಎನ್‌.ಮಹೇಶ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ, ಇದೊಂದು ಸೌಜನ್ಯದ ಭೇಟಿ. ಶುಭ ಕೋರಲು ಹೋಗಿದ್ದೆ ಎಂದು ಸ್ವತಃ ಮಹೇಶ್‌ ಅವರೇ ಸ್ಪಷ್ಟನೆ ನೀಡಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಹಜವಾಗಿಯೇ ಕುತೂಹಲ ಕೆರಳಿಸಿದ್ದು, ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಉಹಾಪೋಹಗಳಿಗೆ ಪುಷ್ಟಿನೀಡಿದಂತಾಗಿದೆ.

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ನೂತನ ಸಿಎಂ BSY

ವಿಧಾನಸೌಧದಲ್ಲಿ ಗುರುವಾರ ಯಡಿಯೂರಪ್ಪ ಅವರು ಇಲಾಖಾವಾರು ಸಭೆ ನಡೆಸುತ್ತಿದ್ದ ಸಮಿತಿ ಕೊಠಡಿಗೆ ಮಹೇಶ್‌ ಆಗಮಿಸಿದರು. ಈ ವೇಳೆ ಮಹೇಶ್‌ ಅವರ ಪ್ರವೇಶಕ್ಕೆ ಅಧಿಕಾರಿಗಳು ನಿರಾಕರಿಸಿದರು. ಸಭೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹೇಶ್‌ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಬಹುಮತ ಸಾಬೀತುಪಡಿಸುವ ದಿನ ಸದನಕ್ಕೆ ಗೈರಾಗಿದ್ದರಿಂದ ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿಬಂದಿದ್ದವು.

ಬಿಎಸ್‌ವೈ ವಿಧಾನಸೌಧಕ್ಕೆ ಬರುವುದನ್ನು ತಿಳಿಯಲು ಕಚೇರಿಗೆ ಸೈರನ್ ಅಳವಡಿಕೆ!

ಆದರೆ, ಬಿಜೆಪಿಗೆ ಸೇರ್ಪಡೆ ವಿಚಾರವನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಶಾಸಕ ಎನ್‌.ಮಹೇಶ್‌, ಮುಖ್ಯಮಂತ್ರಿಯಾದ ಬಳಿಕ ಯಡಿಯೂರಪ್ಪ ಅವರಿಗೆ ಶುಭ ಕೋರಿರಲಿಲ್ಲ. ಹೀಗಾಗಿ ಸಹಜವಾಗಿ ಭೇಟಿಯಾಗಿ ಶುಭ ಕೋರಿದ್ದೇನೆ. ನಾನು ಬಿಜೆಪಿ ಹೋಗುವ ಪ್ರಶ್ನೆಯೇ ಇಲ್ಲ. ಈ ಸಹಜ ಭೇಟಿಯ ಬಗ್ಗೆ ಮಾಧ್ಯಮಗಳು ಆಧಾರ ರಹಿತ ವರದಿ ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು.