ಬೆಂಗಳೂರು (ಆ.02]:  ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದು, ನಿಗದಿತ ಸಮಯಕ್ಕೆ ಕಚೇರಿಗೆ ಆಗಮಿಸದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಬೆಳಗ್ಗೆ ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ದಿಢೀರ್‌ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದರು.

ಸರ್ಕಾರಿ ಕೆಲಸದ ವೇಳೆಯಲ್ಲಿ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಅಶಿಸ್ತು ತೋರುವ ಅಧಿಕಾರಿ, ಸಿಬ್ಬಂದಿಯನ್ನು ಸಹಿಸುವುದಿಲ್ಲ. ಸಿಬ್ಬಂದಿಯಲ್ಲಿ ಸಮಯ ಪಾಲನೆ ಇಲ್ಲದಿದ್ದರೆ ಹೇಗೆ ಕರ್ತವ್ಯ ನಿರ್ವಹಿಸುತ್ತೀರಿ? ಈ ಮೊದಲು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಿರಿ ಎಂಬುದು ಗೊತ್ತಿಲ್ಲ. ಆದರೆ, ನಾನು ಮುಖ್ಯಮಂತ್ರಿಯಾಗಿರುವಾಗ ನಿಗದಿತ ಸಮಯಕ್ಕೆ ಬಂದು ಕೆಲಸ ಮಾಡಬೇಕು. ಅಧಿಕಾರಿಗಳು ಸೇರಿದಂತೆ ಕೆಳಹಂತದ ಸಿಬ್ಬಂದಿ ಶಿಸ್ತು ಪಾಲಿಸಬೇಕು. ಶಿಸ್ತು ಇಲ್ಲದಿದ್ದರೆ ಬೇರೆಯವರು ಪಾಲನೆ ಮಾಡಲಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಇನ್ನು ಮುಂದೆ ಪದೇ ಪದೇ ದಿಢೀರ್‌ ಭೇಟಿ ನೀಡುವ ಮೂಲಕ ಸಿಬ್ಬಂದಿಯ ಕಾರ್ಯವೈಖರಿಯನ್ನು ಗಮನಿಸುತ್ತೇನೆ. ಇಂತಹ ಪ್ರಮಾದಗಳು ಆಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು. ಒಂದು ಹಂತಕ್ಕೆ ಯಡಿಯೂರಪ್ಪ ಅವರು ಸಿಬ್ಬಂದಿಯ ವರ್ತನೆಯಿಂದ ಕೆಂಡಾಮಂಡಲರಾದರು. ಮುಖ್ಯಮಂತ್ರಿಗಳ ದಿಢೀರ್‌ ಭೇಟಿಯಿಂದಾಗಿ ಸಿಬ್ಬಂದಿ, ಅಧಿಕಾರಿಗಳ ವರ್ಗದಲ್ಲಿ ನಡುಕ ಉಂಟಾಯಿತು.