ವಿಜಯಪುರ, (ಅ.04): ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಯಾವ ಶಕ್ತಿಯೂ ನಮ್ಮನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೇಂದ್ರದಿಂದ ನೀಡಿರುವ ನೋಟಿಸ್ ಇನ್ನೂ ಸಿಕ್ಕಿಲ್ಲ.  ನೋಟಿಸ್ ಸಿಕ್ಕ ಮೇಲೆ ಚರ್ಚಿಸಿ ಸೂಕ್ತ ಉತ್ತರ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಶೋಕಸ್ ನೋಟಿಸ್ ಬಗ್ಗೆ ವಿಜಪುರದಲ್ಲಿ ಪ್ರತಿಕ್ರಿಯಿಸಿದ ಯತ್ನಾಳ್, ಕಳೆದ 40 ವರ್ಷಗಳಿಂದ ಶಾಸಕ, ಲೋಕಸಭೆ ಸದಸ್ಯ, ಕೇಂದ್ರದ ಸಚಿವ, ವಿಧಾನ ಪರಿಷತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ನನಗೂ ಏನು ಮಾತನಾಡಬೇಕು ಎಂಬುದರ ಅರಿವಿದೆ.  ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸರಕಾರದ ವಿರುದ್ಧ ಮಾತನಾಡಿಲ್ಲ, ಸರಕಾರ ಕೆಡವಿಲ್ಲ. ಕನ್ನಡಿಗರಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ಯಾರಿಗೂ ನಾನು ಹೆದರುವುದಿಲ್ಲ. ಜನಪರ ಧ್ವನಿ ಎತ್ತುತ್ತಲೇ ಇರುತ್ತೇನೆ ಎಂದು ಖಡಕ್ ಆಗಿಯೇ ಹೇಳಿದರು. ಈ ಮೂಲಕ ಶೋಕಸ್ ನೋಟಿಸ್ ಗೆ ಸೆಡ್ಡು ಹೊಡೆದಂತಿದೆ.

ನೆರೆ ಪರಿಹಾರ ಬಿಡುಗಡೆ ಮಾಡಿಸಿ ಎಂದಿದ್ದಕ್ಕೆ ಯತ್ನಾಳ್​ಗೆ ಸಂಕಷ್ಟ 

ಯಾರಿಂದಲೂ ಬುದ್ದಿವಾದ ಹೇಳಿಸಿಕೊಳ್ಳುವ ಅನಿವಾರ್ಯತೆ ನನಗಿಲ್ಲ. ಕನ್ನಡ ನಾಡಿನ ಜನರ ಪರವಾಗಿ ಮೋದಿಯವರಿಗೆ ‌ವಿಷಯವನ್ನು ಗಮನಕ್ಕೆ ತಂದಿದ್ದೇನೆ. ಮುಂದೊಂದು ದಿನ ಪ್ರಧಾನಿ ನನ್ನ ನಿಷ್ಠೆಯ ಬಗ್ಗೆ ಶಹಬ್ಬಾಶ್ ಎನ್ನುವ ಕಾಲ ಬಂದೆ ಬರುತ್ತದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಸಂಸದರ ನಿಯೋಗವನ್ನು ಕೊಂಡೊಯ್ದು ನೆರೆ ಪರಿಹಾರಕ್ಕೆ ಮನವಿ ಸಲ್ಲಿಸಬೇಕು. ಈ ವಿಚಾರದಲ್ಲಿ ಯಾರೂ ಹಾರಿಕೆಯ ಉತ್ತರ ನೀಡಬಾರದು. ಜನರ ಭಾವನೆಗಳನ್ನು ಲಘುವಾಗಿ ಪರಿಗಣಿಸಬಾರದು. ನಮಗೆ ದಕ್ಷ ಪ್ರಧಾನಿ ಸಿಕ್ಕಿದ್ದಾರೆ. ಸಮಸ್ಯೆ ಬಂದಾಗ ಅವರನ್ನು ಕೇಳಬೇಕು. ಅದನ್ನು ಬಿಟ್ಟು ಮನಬಂದಂತೆ ಏಕೆ ಹೇಳಿಕೆ ನೀಡುತ್ತಿದ್ದೀರಿ? ಎಂದು ಸಂಸದರು ಮತ್ತು ಸಚಿವರ ವಿರುದ್ಧ ಮತ್ತೆ ಹರಿಹಾಯ್ದರು.

ನೆರೆ ಪರಿಹಾರ ವಿಚಾರದಲ್ಲಿ ರಾಜ್ಯ ಬಿಜೆಪಿ ಸಂಸದರನ್ನು ಯತ್ನಾಳ್ ಅವರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದ್ರಿಂದ ಅವರಿಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಶೋಕಸ್ ನೋಡಿಸ್ ಜಾರಿ ಮಾಡಿದ್ದು, 10 ದಿನದೊಳಗೆ ಉತ್ತರಿಸುವಂತೆ ತಾಕೀತು ಮಾಡಿದೆ.