ಈ ಉಭಯ ಪಕ್ಷಗಳ ನಡುವಣ ಈ ದಿಢೀರ್‌ ಆಪ್ತತೆ ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. 

ಚೆನ್ನೈ/ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮಕ್ಕೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಡಿಎಂಕೆ ನಾಯಕ ಸ್ಟಾಲಿನ್‌, ಗುರುವಾರ ಚೆನ್ನೈನ ಬಿಜೆಪಿ ಕಚೇರಿಗೆ ಆಗಮಿಸಿದ್ದರು. 

ಅವರ ಜೊತೆಗೆ ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಕೂಡಾ ಉಪಸ್ಥಿತರಿದ್ದರು. ಬಿಜೆಪಿ ಕಚೇರಿಗೆ ಆಡಳಿತಾರೂಢ ಎಐಎಡಿಎಂಕೆ ನಾಯಕರು ಕೂಡಾ ಆಗಮಿಸಿದ್ದರಾದರೂ, ಡಿಎಂಕೆ ನಾಯಕರ ಆಗಮನ ಸಾಕಷ್ಟುಕುತೂಹಲ ಕೆರಳಿಸಿದೆ. 

ಇನ್ನೊಂದೆಡೆ ಡಿಎಂಕೆ ನಾಯಕ ದಿ.ಕರುಣಾನಿಧಿ ಅವರ ಸ್ಮರಣಾರ್ಥ ಆ.30ಕ್ಕೆ ಪಕ್ಷದ ವತಿಯಿಂದ ಚೆನ್ನೈನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಇದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಉಭಯ ಪಕ್ಷಗಳ ನಡುವಣ ಈ ದಿಢೀರ್‌ ಆಪ್ತತೆ ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.