Asianet Suvarna News Asianet Suvarna News

ರಾಜ್ಯ ಸರ್ಕಾರಕ್ಕೆ 15 ದಿನ ಡೆಡ್ ಲೈನ್ ನೀಡಿದ ಬಿಜೆಪಿ

ರಾಜ್ಯ ಸರ್ಕಾರಕ್ಕೆ ಬಿಜೆಪಿ ಇದೀಗ 15 ದಿನಗಳ ಕಾಲ ಡೆಡ್ ಲೈನ್ ಅನ್ನು ನೀಡಿದೆ. 15 ದಿನಗಳ ಒಳಗಾಗಿ ಪ್ರಮುಖ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ. 

Misuse of Waqf Property  BJP Give 15 Days Dead Line To Govt
Author
Bengaluru, First Published Jul 20, 2018, 8:28 AM IST

ಬೆಂಗಳೂರು :  ಮುಸ್ಲಿಂ ಸಮುದಾಯಕ್ಕೆ ಸೇರಿದ ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿರುವ ರಾಜ್ಯ ಬಿಜೆಪಿ ನಾಯಕರು, ತನಿಖೆಗೆ ಒಪ್ಪಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಪ್ರತಿಪಕ್ಷದ ನಾಯಕ ಶ್ರೀನಿವಾಸ ಪೂಜಾರಿ ಮಾತನಾಡಿ, ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಸಂಬಂಧ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಹಗರಣದಲ್ಲಿ ಹಲವು ರಾಜಕಾರಣಿಗಳು ಭಾಗಿಯಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿದೆ. ಎರಡು ಲಕ್ಷ ಕೋಟಿ ರು.ಗಿಂತ ಹೆಚ್ಚು ಮೌಲ್ಯದ 27 ಸಾವಿರ ಎಕರೆಯಷ್ಟು ಭೂಮಿ ಅಕ್ರಮವಾಗಿ ಕಬಳಿಕೆಯಾಗಿದೆ. ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಒಂದು ವೇಳೆ  15 ದಿನದಲ್ಲಿ ರಾಜ್ಯ ಸರ್ಕಾರವು ಸಿಬಿಐ ತನಿಖೆಗೊಳಪಡಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದರು. 

ಹಗರಣ ಕುರಿತು ಅಧಿವೇಶನ ವೇಳೆ ಸದನದಲ್ಲಿ ಪ್ರಸ್ತಾಪಿಸಿದಾಗ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ಸಿಬಿಐಗೆ ವಹಿಸಲು ತಕರಾರು ಇಲ್ಲ ಎಂಬ ಹೇಳಿಕೆ ನೀಡಿದ್ದರು. ನಂತರ ನ್ಯಾಯಾಲಯದ ನೆಪ ಹೇಳಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಇದು ಹಕ್ಕುಚ್ಯುತಿಯ ಉಲ್ಲಂಘನೆಯಾಗಲಿದ್ದು, ಸರ್ಕಾರದ ವಿರುದ್ಧ ಮುಂದಿನ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಬೇಕಾಗುತ್ತದೆ. ಸಚಿವರ ಭರವಸೆ ಮೇರೆಗೆ ಸದನದಲ್ಲಿ ಚರ್ಚೆ ಮುಕ್ತಾಯಗೊಳಿಸಲಾಯಿತು. 

ಹಿರಿಯ ತಲೆಗಳು ಉರುಳುವ ಭೀತಿ ಕಾಂಗ್ರೆಸ್‌ಗೆ ಇರಬಹುದು. ಆದರೆ, ಜೆಡಿಎಸ್‌ಗೆ ಇಲ್ಲ. ಹೀಗಾಗಿ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕು. ರಾಜ್ಯದಲ್ಲಿ ಪ್ರತಿಭಟನೆಗಳು ತೀವ್ರಗೊಂಡರೆ ಇದಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ನೇರ ಹೊಣೆಯಾಗಲಿದ್ದಾರೆ ಎಂದರು. ಸದನದ ಕಲಾಪ ಮುಗಿದ ಬಳಿಕ ಸಚಿವ ಖಾದರ್ ಹೋಗಿ ಜಮೀರ್ ಅವರಿಗೆ ಬುದ್ಧಿವಾದ ಹೇಳಿರಬಹುದು. ಈ ಹಿನ್ನೆಲೆಯಲ್ಲಿ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಮಾಣಿಪ್ಪಾಡಿ ವರದಿಯನ್ನು ಯಥಾವತ್ತಾಗಿ ಮಂಡಿಸಿ ಎಂದು ಒತ್ತಾಯ ಮಾಡಿ ದರೆ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹೋರಾಟ ನಡೆಸುವುದರ ಜತೆಗೆ ಕಾನೂನು ಹೋರಾಟವನ್ನು ಸಹ ಮಾಡಲಾಗುವುದು ಎಂದರು. 

ಅನ್ವರ್ ಮಾಣಿಪ್ಪಾಡಿ ಮಾತನಾಡಿ, 2012 ರ ಮಾ.26ರಂದು ಏಳು ಸಾವಿರ ಪುಟಗಳ ವರದಿಯನ್ನು  ಸರ್ಕಾರಕ್ಕೆ ನೀಡಲಾಯಿತು. ಬಿಜೆಪಿ ಸರ್ಕಾರ ಸಂಪುಟದಲ್ಲಿ ಚರ್ಚಿಸಿ ಉಭಯ ಸದನದಲ್ಲಿ ಮಂಡನೆಗೆ ನಿರ್ಧರಿಸಲಾಯಿತು. 2013 ರಲ್ಲಿ  ಅನುಮೋದಿಸಿ ಕೆಲವು ಉತ್ತಮ ವಿಧೇಯಕಗಳನ್ನು ಜಾರಿಗೊಳಿಸಿತು. ಯಾವ ಆಸ್ತಿಯಲ್ಲಿ ಕಬಳಿಕೆಯಾಗಿ ದೆಯೋ, ಆ ಆಸ್ತಿಯನ್ನು ವಾಪಸ್ ತರುವುದಕ್ಕಾಗಿ ರಾಜ್ಯ ಸಮಿತಿ ಮತ್ತು ಜಿಲ್ಲಾ ಸಮಿತಿ ರಚಿಸಲಾಯಿತು. 

ಯಾರು ಸಹ ನ್ಯಾಯಾಲಯಕ್ಕೆ ಹೋಗದ ಸಮಿತಿಯ ಮುಂದೆ ಹೋಗಬೇಕು ಎಂಬ ವಿಧೇಯಕ ರಚನೆ ಮಾಡಲಾಯಿತು. ಆದರೆ, ನನ್ನ ಅವಧಿ  ಮುಗಿದ ಬಳಿಕ ವಿಧೇಯಕ ತರಲಾಯಿತು ಎಂಬ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು. ವರದಿಯನ್ನು ಲೋಕಾಯುಕ್ತಕ್ಕೆ ನೀಡಿದಾಗ ಅದರ ತನಿಖೆಗಾಗಿ ಉಪಲೋಕಾಯುಕ್ತರಿಗೆ ವಹಿಸಲಾಯಿತು. ಉಪಲೋಕಾಯುಕ್ತರು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಆ ವರದಿಯೂ ಸಹ ಮಂಡನೆಯಾಗಿಲ್ಲ. ಅದನ್ನು ಸಹ ಮಂಡನೆ ಮಾಡಬೇಕಾದ ಅಗತ್ಯ ಇದೆ ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಮಹಾನ್ ಶಕ್ತಿಗಳು ಒಂದಾಗಿ ಪ್ರಕರಣವನ್ನು ಮುಚ್ಚುವ
ಪ್ರಯತ್ನ ನಡೆಸಲಾಗುತ್ತಿದೆ ಎಂದರು.  

Follow Us:
Download App:
  • android
  • ios