ಭೋಪಾಲ್ :  ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಅದನ್ನು ಬಗೆಹರಿಸಿಕೊಳ್ಳಲಾಗುವುದು ಎಂದು ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಹೇಳಿದ್ದಾರೆ.

ಮಧ್ಯ ಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ ತಮ್ಮ ಬೆಂಬಲವನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂಬ ಮಾಯಾವತಿ ಬೆದರಿಕೆಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ. 

ಸದ್ಯ ಎಲ್ಲಾ ವಿಪಕ್ಷಗಳ ಪ್ರಮುಖ ಗುರಿ ಎಂದರೆ ಬಿಜೆಪಿಯನ್ನು ಸೋಲಿಸುವುದೇ ಆಗಿದೆ.  ಈ ನಿಟ್ಟಿನಲ್ಲಿ ಎಲ್ಲಾ ಅಸಮಾಧಾನಗಳನ್ನು ಬಗೆಹರಿಸಲಾಗುವುದು ಎಂದರು. 

ದೇಶದ ಆಡಳಿತದಿಂದ ಬಿಜೆಪಿಯನ್ನು ಕೆಳಕ್ಕಿಳಿಸುವ ಬಗ್ಗೆ ಎಲ್ಲರೂ ಒಗ್ಗಟ್ಟಾಗಿದ್ದೇವೆ.  ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ.  ಒಂದು ಅಂತ ಸಮಸ್ಯೆ ಇದ್ದರೆ  ಅದು ಶೀಘ್ರ ನಿವಾರಣೆಯಾಗುವ ಭರವಸೆ ಇದೆ ಎಂದರು. 

ಕಳೆದ ಡಿಸೆಂಬರ್ ತಿಂಗಳಲ್ಲಿ ಕಮಲ್ ನಾಥ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ವೇಳೆ ಸರ್ಕಾರ ರಚನೆಗೆ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಬೆಂಬಲ ನೀಡಿತ್ತು. 

ಕೆಲ ದಿನಗಳ ಹಿಂದಷ್ಟೇ  ಗುನಾ ಲೋಕಸಭಾ ಕ್ಷೇತ್ರದ BSP ಅಭ್ಯರ್ಥಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಈ ಬೆಳವಣಿಗೆಯಿಂದ BSP ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ಮೇಲೆ ಸಿಟ್ಟಾಗಿದ್ದರು.

ಗುನಾ ಲೋಕಸಭಾ ಕ್ಷೇತ್ರದ BSP-SP ಮೈತ್ರಿ ಅಭ್ಯರ್ಥಿ ಲೋಕೇಂದ್ರ ಸಿಂಗ್ ರಾಜಪೂತ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಇದೇ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಈ ಬೆಳವಣಿಗೆಯಿಂದ ಇಕ್ಕಟ್ಟಿಗೆ ಸಿಲುಕಿದ್ದ BSP ಮುಖ್ಯಸ್ಥೆ ಮಾಯಾವತಿ, ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವ ಬೆದರಿಕೆವೊಡ್ಡಿದ್ದರು.