ಜಮೀನಿಗೆ ಆಗಮಿಸಿದ್ದ ರೈತನೋರ್ವನನ್ನು ದೈತ್ಯ ಹೆಬ್ಬಾವೊಂದು ನುಂಗಿ ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ.
ಜಕಾರ್ತ(ಮಾ.30): ಜಮೀನಿಗೆ ಆಗಮಿಸಿದ್ದ ರೈತನೋರ್ವನನ್ನು ದೈತ್ಯ ಹೆಬ್ಬಾವೊಂದು ನುಂಗಿ ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ.
ಸುಲಾವೆಸಿ ಪೂರ್ವ ದ್ವೀಪದ ಸಾಲುಬಿರೊ ಗ್ರಾಮದ ರೈತನನ್ನು ದೈತ್ಯ ಹೆಬ್ಬಾವು ನುಂಗಿದ್ದು, ಹೆಬ್ಬಾವನ್ನು ಹಿಡಿದು ಅದರ ಹೊಟ್ಟೆಯನ್ನು ಸೀಳಿದಾಗ ರೈತನ ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಮೃತ ರೈತನನ್ನು ಅಕ್ಬರ್ ಎಂದು ಗುರುತಿಸಲಾಗಿದ್ದು, ಸಾಲುಬಿರೋ ಗ್ರಾಮದಲ್ಲಿ ಈತ ತಾಳೆ ಹಣ್ಣು ಬೆಳೆದಿದ್ದ. ಹಣ್ಣುಕೊಯ್ಯಲು ತೆರಳಿದ್ದ ವೇಳೆ ಆತ ನಾಪತ್ತೆಯಾಗಿದ್ದ.
ಈತನ ಶೋಧಕ್ಕಾಗಿ ಇಡೀ ಗ್ರಾಮಸ್ಥರು ಜಮೀನಿಗೆ ಆಗಮಿಸಿದ್ದಾಗ ಅಲ್ಲಿ ದೈತ್ಯ ಹೆಬ್ಬಾವು ಪತ್ತೆಯಾಗಿತ್ತು ಮತ್ತು ಹಾವಿನ ಹೊಟ್ಟೆ ದೈತ್ಯಾಕಾರದಲ್ಲಿ ಊದಿಕೊಂಡಿತ್ತು. ಅಲ್ಲದೆ ಅದೇ ಜಮೀನಿನಲ್ಲಿ ರೈತ ಅಕ್ಬರ್ ಧರಿಸಿದ್ದ ಬೂಟುಗಳು ಮತ್ತು ಸಮೀಪದಲ್ಲಿ ಆತ ಜಮೀನಿಗೆ ತಂದಿದ್ದ ಕೆಲ ಕೃಷಿ ಸಲಕರಣೆಗಳು ಪತ್ತೆಯಾಗಿತ್ತು. ಇದರಿಂದ ಅನುಮಾನಗೊಂಡ ರೈತರು ಹಾವನ್ನು ಹಿಡಿದು,ಹೊಟ್ಟೆ ಸೀಳಿದಾಗ ಮನುಷ್ಯನ ಶವ ಪತ್ತೆಯಾಗಿದೆ.
