ರಾಜ್ಯದಲ್ಲಿರುವ ಮುಸ್ಲಿಮೇತರ ಸಮುದಾಯಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡುವ ವಿಚಾರದಲ್ಲಿ ಪ್ರತಿಕ್ರಿಯಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊನೆಯ ಅವಕಾಶವನ್ನು ನೀಡಿದೆ. ಮೂರು ತಿಂಗಳೊಳಗೆ ನ್ಯಾಯಾಲಯದಲ್ಲಿ ಉತ್ತರ ಸಲ್ಲಿಸುವಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಗಡುವು ನೀಡಿದೆ.
ನವದೆಹಲಿ: ರಾಜ್ಯದಲ್ಲಿರುವ ಮುಸ್ಲಿಮೇತರ ಸಮುದಾಯಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡುವ ವಿಚಾರದಲ್ಲಿ ಪ್ರತಿಕ್ರಿಯಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊನೆಯ ಅವಕಾಶವನ್ನು ನೀಡಿದೆ.
ಮೂರು ತಿಂಗಳೊಳಗೆ ನ್ಯಾಯಾಲಯದಲ್ಲಿ ಉತ್ತರ ಸಲ್ಲಿಸುವಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಗಡುವು ನೀಡಿದೆ.
ಅಲ್ಪಸಂಖ್ಯಾತ ಮಾನ್ಯತೆ ಬಗ್ಗೆಗಿರುವ ಗೊಂದಲವನ್ನು ಬಗೆಹರಿಸಲು ಸಮಿತಿಯನ್ನು ರಚಿಸುವಂತೆ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ ನೀಡಿತ್ತು.
ಆದರೆ ಸದ್ಯದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಲ್ಲಿ ಸಭೆಯನ್ನು ಕರೆಯಲಾಗಲಿಲ್ಲವೆಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಪ್ರತಿಕ್ರಿಯಿಸಿದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರತಿಕ್ರಿಯೆಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ, ನ್ಯಾಯಾಲಯವನ್ನು ಅವಮಾನಿಸುತ್ತಿದ್ದೀರೆಂದು ಎಚ್ಚರಿಕೆ ನೀಡಿದೆ.
ಮುಸ್ಲಿಮರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಿರುವುದನ್ನು ಪ್ರಶ್ನಿಸಿ ಅಂಕುರ್ ಶರ್ಮಾ ಎಂಬವರು ಸುಪ್ರೀಂ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕುಳಿತು ಈ ಗೊಂದಲವನ್ನು ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು.
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರಿಗೆ ಅಲ್ಪಸಂಖ್ಯಾತರ ಸೌಲಭ್ಯ ಒದಗಿಸಲಾಗಿರುವ ಬಗ್ಗೆ ಸುಪ್ರೀಂ ಕೇಂದ್ರ ಸರ್ಕಾರದಿಂದಲೂ ಪ್ರತಿಕ್ರಿಯೆ ಕೇಳಿತ್ತು. ಕೇಂದ್ರವು ಪ್ರತಿಕ್ರಿಯಿಸದಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ರೂ.30000 ದಂಡವನ್ನೂ ವಿಧಿಸಿತ್ತು.
