ಚಿಕ್ಕಬಳ್ಳಾಪುರ: ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಅರಣ್ಯ ಸಚಿವ ಆರ್‌. ಶಂಕರ್‌ ಅವರು ಇದು ಯಾರ ಸಮಾಧಿ ಎಂದು ತಮ್ಮ ಆಪ್ತ ಸಹಾಯಕರನ್ನು ಕೇಳಿ ಅಪಹಾಸ್ಯಕ್ಕೆ ತುತ್ತಾದ ಘಟನೆ ಶುಕ್ರವಾರ ನಡೆಯಿತು.

ಪೂರ್ವ ನಿಗದಿಯಂತೆ ಸಚಿವರು ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಮುದ್ದೇನಹಳ್ಳಿಗೆ ಶುಕ್ರವಾರ ಆಗಮಿಸಿದ್ದರು. ಈ ವೇಳೆ ವಿಶ್ವೇಶ್ವರಯ್ಯ ಅವರ ಸಮಾಧಿಗೆ ನಮನ ಸಲ್ಲಿಸಿದ ಬಳಿಕ, ‘ಇದು ಯಾರ ಸಮಾಧಿ’ ಎಂದು ಸಾರ್ವಜನಿಕವಾಗಿಯೇ ತಮ್ಮ ಆಪ್ತ ಸಹಾಯಕರನ್ನು ಕೇಳುವ ಮೂಲಕ ಮುಜುಗರಕ್ಕೆ ಒಳಗಾದರು. ಸಮಾಧಿ ಪಕ್ಕದಲ್ಲೇ ವಿಶ್ವೇಶ್ವರಯ್ಯ ಅವರ ಬೃಹತ್‌ ಪುತ್ಥಳಿ ಇದ್ದರೂ ಸಚಿವರು, ಅದನ್ನು ಗಮನಿಸಿದೇ ಇರುವುದು, ತಾವು ಎಲ್ಲಿಗೆ ಆಗಮಿಸಿದ್ದೇನೆ ಎಂಬುದೇ ತಿಳಿಯದೇ ಇರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಇದಾದ ಬಳಿಕ ಸಚಿವರು, ಮುದ್ದೇನಹಳ್ಳಿ ವೃತ್ತದಲ್ಲಿ ನಿರ್ಮಿಸಿರುವ ಸರ್‌ಎಂವಿ ಅವರ ಪುತ್ಥಳಿಯನ್ನು ಉದ್ಘಾಟಿಸಿದರು. ಈ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರು. ಪ್ರತಿ ಪ್ರಶ್ನೆಗೂ ಅರಣ್ಯ ಇಲಾಖೆ ಡಿಎಫ್‌ಒ, ತಮ್ಮ ಆಪ್ತ ಸಹಾಯಕರತ್ತ ಮುಖ ಮಾಡುತ್ತಿದ್ದರು.

ರಾಜ್ಯದಲ್ಲಿ ಒತ್ತುವರಿ ಆಗಿರುವ ಅರಣ್ಯದ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗಿದೆ. ಇಲಾಖೆಯಲ್ಲಿ 3 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಇದ್ದು, ಹಂತಹಂತವಾಗಿ ಭರ್ತಿ ಮಾಡಲಾಗುವುದು. ಅರಣ್ಯ ಇಲಾಖೆಯಲ್ಲಿನ ಅಕ್ರಮಗಳ ಬಗ್ಗೆ ವರದಿ ತರಿಸಿಕೊಂಡು ನೋಡುವುದಾಗಿ ಹೇಳುವ ಮೂಲಕ ಇಲಾಖೆಯ ಬಗ್ಗೆ ತಮಗೆ ಯಾವುದೇ ಅರಿವಿಲ್ಲ ಎಂಬುದನ್ನು ಬಹಿರಂಗ ಪಡಿಸಿದರು.