ಬೆಂಗಳೂರು [ಸೆ.06] :  ಕೆಲಸದಲ್ಲಿ ಯಾವುದೇ ರೀತಿಯ ಕರ್ತವ್ಯಲೋಪ ಮತ್ತು ಗೈರು ಹಾಜರಿಯನ್ನು ಸಹಿಸುವುದಿಲ್ಲ, ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವ ಕೆಲಸವನ್ನು ಮಾಡುವಂತೆ ಸಿಬ್ಬಂದಿಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಾಕೀತು ಮಾಡಿದ್ದಾರೆ.

ಸಚಿವರಾದ ಬಳಿಕ ಮೊದಲ ಬಾರಿಗೆ ಬನ್ನೇರುಘಟ್ಟದಲ್ಲಿರುವ ವಿವಿಧ ಸಂಶೋಧನಾ ಹಾಗೂ ಪಶು ಸಂಗೋಪನಾ ಕೇಂದ್ರಗಳಿಗೆ ದಿಢೀರ್‌ ಭೇಟಿಯ ವೇಳೆ ಸಿಬ್ಬಂದಿಗಳಿಗೆ ಈ ಎಚ್ಚರಿಕೆ ನೀಡಿದರು.

ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಕ್ರಮ ವಹಿಸಲಾಗುವುದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇಲಾಖೆಯಲ್ಲಿ ಅತ್ಯುತ್ತಮ ತಳಿ ಸಂವರ್ಧನೆ ಕಾರ್ಯ ನಡೆಯುತ್ತಿದೆ. ಅದನ್ನು ಸೂಕ್ತ ರೀತಿಯಲ್ಲಿ ರೈತರಿಗೆ ತಲುಪಿಸಲು ಅತ್ಯುನ್ನತವಾದ ತರಬೇತಿ ವ್ಯವಸ್ಥೆ ನೀಡಲಾಗುವುದು. ಹೈನುಗಾರಿಕೆ ಅಭಿವೃದ್ಧಿಯೊಂದಿಗೆ ಸಮಗ್ರ ಪಶುಪಾಲನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಮೊಲ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ತೇಜನ ನೀಡಲಾಗುವುದು.ಇಲಾಖೆ ರೈತಾಪಿ ವರ್ಗದವರಿಗೆ ಹತ್ತಿರವಿರುವುದರಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲಾ ರೀತಿಯ ಸಹಾಯಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ಪಶುಸಂಗೋಪನಾ ಇಲಾಖೆಯ ಹೆಸರುಘಟ್ಟದ ಜಾನುವಾರು ಕ್ಷೇತ್ರಗಳಾದ ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಜಾನುವಾರು ಸಂವರ್ಧನಾ ಕ್ಷೇತ, ರಾಜ್ಯ ಕುಕ್ಕುಟ ಕ್ಷೇತ್ರ, ಹಂದಿ ತಳಿ ಸಂವರ್ಧನಾ ಕೇಂದ್ರ, ರಾಜ್ಯ ವೀರ್ಯ ಶೇಖರಣಾ ಕೇಂದ್ರ, ಮೊಲ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಕಾಯಂ ಮಾಡುವಂತೆ ಮನವಿ ಮಾಡಿದರು. ಭೇಟಿಯ ವೇಳೆ ಕ್ಷೇತ್ರ ಜಂಟಿ ನಿರ್ದೇಶಕ ಡಾ. ಎಚ್‌.ಎಸ್‌ ಜಯಣ್ಣ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.