ಕೃಷ್ಣಪ್ಪ, ಪ್ರಿಯಕೃಷ್ಣ ಬಿಜೆಪಿಗೆ ಮತ್ತೂ ಸನಿಹ?

news | Tuesday, March 27th, 2018
Suvarna Web Desk
Highlights

ವಸತಿ ಸಚಿವ ಎಂ.ಕೃಷ್ಣಪ್ಪ ಮತ್ತು ಪುತ್ರ ಶಾಸಕ ಪ್ರಿಯಕೃಷ್ಣ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ವಲಸೆ ಹೋಗಲಿದ್ದಾರೆ ಎಂಬ ಸುದ್ದಿ ದಿನೇ ದಿನೇ ಬಲಗೊಳ್ಳುತ್ತಿದೆ.

ಬೆಂಗಳೂರು : ವಸತಿ ಸಚಿವ ಎಂ.ಕೃಷ್ಣಪ್ಪ ಮತ್ತು ಪುತ್ರ ಶಾಸಕ ಪ್ರಿಯಕೃಷ್ಣ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ವಲಸೆ ಹೋಗಲಿದ್ದಾರೆ ಎಂಬ ಸುದ್ದಿ ದಿನೇ ದಿನೇ ಬಲಗೊಳ್ಳುತ್ತಿದೆ.

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಕಾರ್ಯಕ್ರಮಗಳಿಂದ ಕೃಷ್ಣಪ್ಪ ಅವರು ದೂರ ಉಳಿದ ಬೆನ್ನಲ್ಲೇ ಬಿಜೆಪಿ ನಾಯಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ತಿಳಿದು ಬಂದಿದೆ.

ಬಿಜೆಪಿಗೆ ವಲಸೆ ಬಂದಲ್ಲಿ ವಿಜಯನಗರದಿಂದ ಕೃಷ್ಣಪ್ಪ ಅವರಿಗೆ ಟಿಕೆಟ್‌ ನೀಡಲಾಗುವುದು. ಆದರೆ, ಪುತ್ರ ಪ್ರಿಯಕೃಷ್ಣ ಅವರಿಗೆ ಗೋವಿಂದರಾಜನಗರದ ಬದಲು ಬೇರೊಂದು ಕ್ಷೇತ್ರದಿಂದ ಟಿಕೆಟ್‌ ನೀಡಲಾಗುವುದು ಎಂಬ ಮಾತನ್ನು ಬಿಜೆಪಿ ನಾಯಕರು ಹೇಳಿದ್ದಾರೆ. ಇದಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸದ ಕೃಷ್ಣಪ್ಪ ಅವರು ಗೋವಿಂದರಾಜನಗರ ಕ್ಷೇತ್ರದಿಂದಲೇ ಪುತ್ರನಿಗೆ ಟಿಕೆಟ್‌ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಆದರೆ, ಈ ಹಂತದವರೆಗೂ ಕೃಷ್ಣಪ್ಪ ಮತ್ತವರ ಪುತ್ರ ಪ್ರಿಯಕೃಷ್ಣ ಅವರು ಬಿಜೆಪಿಗೆ ಬಂದೇ ಬಿಡುತ್ತಾರೆ ಎಂಬುದನ್ನು ಖಚಿತವಾಗಿ ಹೇಳುವ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ಇಲ್ಲ. ಮಾತುಕತೆ ಅಂತಿಮ ಹಂತದಲ್ಲಿ ಇರುವುದರಿಂದ ಅವರ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಂತೆ ಬೆಂಗಳೂರಿನ ಪಕ್ಷದ ಮುಖಂಡರಿಗೆ ಹಿರಿಯ ನಾಯಕರು ಸಂದೇಶ ರವಾನಿಸಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ವಿಜಯನಗರ ಮತ್ತು ಗೋವಿಂದರಾಜನಗರ ಎರಡೂ ಕ್ಷೇತ್ರಗಳನ್ನು ವಲಸೆ ಬಂದವರಿಗೇ ನೀಡಿದಲ್ಲಿ ಪಕ್ಷದ ಕಾರ್ಯಕರ್ತರು ನೈತಿಕವಾಗಿ ಕುಸಿಯಬಹುದು ಎಂಬ ಕಾರಣಕ್ಕಾಗಿ ಒಂದು ಕ್ಷೇತ್ರ ನೀಡುವ ಷರತ್ತನ್ನು ಬಿಜೆಪಿ ನಾಯಕರು ಮುಂದಿಟ್ಟಿದ್ದಾರೆ. ಪ್ರಿಯಕೃಷ್ಣ ಅವರು ಬಂದಲ್ಲಿ ಯಶವಂತಪುರ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರ ಅಡಗಿದೆ ಎನ್ನಲಾಗಿದೆ.

ಕಳೆದ ಹಲವು ದಿನಗಳಿಂದ ಕೃಷ್ಣಪ್ಪ ಮತ್ತು ಪುತ್ರ ಪ್ರಿಯಕೃಷ್ಣ ಅವರು ತಾವಿರುವ ಕಾಂಗ್ರೆಸ್‌ ಪಕ್ಷದಿಂದ ಅಂತರ ಕಾಪಾಡಿಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ನಡೆದ ನಾಲ್ಕೂ ಜನಾಶೀರ್ವಾದ ಕಾರ್ಯಕ್ರಮಗಳಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೃಷ್ಣಪ್ಪ ಗೈರು ಹಾಜರಾಗಿದ್ದು, ಕಾಂಗ್ರೆಸ್‌ ವಲಯದಲ್ಲಿ ಅಷ್ಟೇ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk