ಆದಾಯ ತೆರಿಗೆ ಇಲಾಖೆ ನೋಟಿಸ್ ಮೂಲಕ ಈ ಡಿ.ಕೆ.ಶಿವಕುಮಾರ್‌ಗೆ ಹೆದರಿಸಲು ಸಾಧ್ಯವಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇಲ್ಲದಿದ್ದರೆ ನಾನು ಏನೆಂಬುದನ್ನು ತೋರಿಸುತ್ತಿದ್ದೆ. ನನ್ನ ಬಳಿಯೂ ಕೆಲವರ ಡೈರಿಗಳು ಇವೆ. 

ಬೆಂಗಳೂರು : ಆದಾಯ ತೆರಿಗೆ ಇಲಾಖೆ ನೋಟಿಸ್ ಮೂಲಕ ಈ ಡಿ.ಕೆ.ಶಿವಕುಮಾರ್‌ಗೆ ಹೆದರಿಸಲು ಸಾಧ್ಯವಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇಲ್ಲದಿದ್ದರೆ ನಾನು ಏನೆಂಬುದನ್ನು ತೋರಿಸುತ್ತಿದ್ದೆ. ನನ್ನ ಬಳಿಯೂ ಕೆಲವರ ಡೈರಿಗಳು ಇವೆ. 

ಕೊನೆಯ ಅಸ್ತ್ರವಾಗಿ ಅವುಗಳನ್ನು ಬಹಿರಂಗ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಾನು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಮೇಲೆ ಇರುವ ಪ್ರಕರಣಗಳನ್ನು ನೆನಪಿಸಬೇಕಾ? ಯಾರದು ಎಷ್ಟು ಡೈರಿ ಇದೆ ಎಂಬುದು ನನಗೂ ಗೊತ್ತು. ಪಾಂಡೋರಾ ಬಾಕ್ಸ್ ಓಪನ್ ಮಾಡುವಂತೆ ಮಾಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. 

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆ ಹಂತದಲ್ಲಿ ಏನೂ ಆಗಲ್ಲವೆಂದಾಗ ನನ್ನಲ್ಲಿರುವ ಡೈರಿಗಳನ್ನು ಬಹಿರಂಗ ಮಾಡುತ್ತೇನೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದರು. ಐಟಿ ನೋಟಿಸ್ ಜಾರಿ ಮಾಡಿದೆ, ಆದರೆ ಸಮನ್ಸ್ ನೀಡಿಲ್ಲ. ಉದ್ದೇಶಪೂರ್ವ ಕವಾಗಿ ನನ್ನನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಯಾವುದಕ್ಕೂ ಹೆದರುವ ವನಲ್ಲ. ಕಾನೂನಿಗೆ ಮಾತ್ರ ಬೆಲೆ ಕೊಡುವವನು. ಪ್ರಕರಣ ಈಗ ಕೋರ್ಟ್‌ನಲ್ಲಿರುವುದರಿಂದ ಏನೂ ಹೇಳುವುದಿಲ್ಲ. 

ಇಲ್ಲವಾಗಿದ್ದರೆ ನಾನೇನು ಎಂಬುದನ್ನು ತೋರಿಸುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾರೋ ಏನೋ ಹೇಳಿಕೆ ಕೊಟ್ಟರು ಎಂದು ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ.